ರಾಯಚೂರು

ಈದ್ ಮುಬಾರಕ್

ಜಿಲ್ಲಾದ್ಯಂತ ರಂಜಾನ್ ಸಂಭ್ರಮ
ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ಮುಸ್ಲಿಂ ಸಮಾಜದವರು ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ನಗರದ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಾವಿರಾರು ಸಂಖ್ಯೆಯ ಮುಸ್ಲಿಂ ಸಮಾಜದ ಜನತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದಲ್ಲಿ ಕಳೆದ ಎರಡು ದಿನಗಳಿಂದ ರಂಜಾನ್ ಹಬ್ಬದ ಹಿನ್ನೆಲೆ ಸಿದ್ಧತೆ ನಡೆದಿತ್ತು. ಹಬ್ಬದ ದಿನ ಮಂಗಳವಾರ ಬೆಳಗ್ಗೆ ಅರಬ್ ಮೊಹಲ್ಲಾದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆ ವೇಳೆ ಶಾಸಕ ಎನ್.ಎಸ್. ಬೋಸರಾಜು, ಡಾ. ಶಿವರಾಜ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ರವೀಂದ್ರ ಜಲ್ದಾರ್, ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ವಿಜಯ ಜೋತ್ಸ್ನಾ, ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್ ಸೇರಿದಂತೆ ಅನೇಕರು ಮುಸ್ಲಿಂ ಸಮಾಜದವರಿಗೆ ಶುಭ ಕೋರಿದರು. ಜಿಲ್ಲೆಯ ಇನ್ನಿತರೆಡೆಯಿಂದಲೂ ಮುಸ್ಲಿಂ ಸಮಾಜದವರು ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
--
ಈದ್-ಉಲ್-ಫಿತರ್
ಲಿಂಗಸ್ಗೂರು: ತಾಲೂಕಿನಾದ್ಯಂತ ಮುಸ್ಲಿಮರು ಈದ್-ಉಲ್ ಫಿತರ್ ಪವಿತ್ರ ರಂಜಾನ್ ಹಬ್ಬವನ್ನು ಮಂಗಳವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ಧಾರ್ಮಿಕ ಪಂಚಾಂಗ ಚಂದ್ರಮಾನ ಪ್ರಕಾರ 9ನೇ ತಿಂಗಳಿಗೆ ರಂಜಾನ್ ಎಂದು ಕರೆಯಲಾಗುತ್ತದೆ. ಒಂದು ತಿಂಗಳ ಪರ್ಯಂತ ಸೂರ್ಯೋದಯದಿಂದ ಅಸ್ತದವರೆಗೆ ಉಪವಾಸ ಮಾಡುವುದು ಈ ಹಬ್ಬದ ವೈಶಿಷ್ಟ್ಯ. ಒಂದು ತಿಂಗಳ ನಂತರ ಚಂದ್ರ ಕಾಣಿಸಿಕೊಳ್ಳುತ್ತಿದ್ದಂತೆ ಮರುದಿನ ಈದ್-ಉಲ್ ಫಿತರ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಪಟ್ಟಣದಲ್ಲಿ ಮುಸ್ಲಿಮರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳಿ ಬಡವ, ಬಲ್ಲಿದ ಎಂಬ ಭೇದ- ಭಾವವಿಲ್ಲದೆ ಎಲ್ಲರೂ ಸಮಾನರೆಂಬಂತೆ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕುರಾನ್ ಪಠಣ: ಸಮಾಜದ ಮುಖಂಡ ಯೂನೂಸ್ ಆಫೀಜ್ ಖಾಜಿ ಪವಿತ್ರ ಕುರಾನ್ ಗ್ರಂಥವನ್ನು ಪಠಣ ಮಾಡಿದರು. ಪ್ರಾರ್ಥನೆಯ ನಂತರ ಪರಸ್ಪರ ಆಲಂಗಿಸಿ ಈದ್ ಮುಬಾರಕ್ ಎಂದು ಹೇಳಿ ಶುಭಾಶಯ ಕೋರುವ ಮೂಲಕ ಸಂಭ್ರಮಾಚರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ತಂಜುಮಿನ್ ಮುಸ್ಲಿಮಿನ್ ಕ್ಕಮಿಟಿ ಉಪಾಧ್ಯಕ್ಷ ಲಾಲ್‌ಅಹ್ಮದ್ ಸಾಬ, ಮುಖಂಡರಾದ ಹಾಜಿ ರಾಜಹುಸೇನ್‌ಸಾಬ, ಖಾದರಪಾಶಾ, ಎಕ್ಬಾಲ್ ಹವಾಲ್ದಾರ್, ಎಂ.ಡಿ. ರಫೀ, ಫಯಾಜ್ ಅಹ್ಮದ್, ಅನೀಸ್‌ಪಾಶಾ, ಅಬ್ದುಲ್ ರೌಫ್ ಗ್ಯಾರಂಟಿ, ಮಹಿಬೂಬ್, ಎಂ.ಡಿ. ಖಾಜಾಹುಸೇನ್, ಮಹಿಬೂಬ್ ಹುಸೇನ್, ಚಾಂದ್ ಪಟೇಲ್ ಸೇರಿದಂತೆ ನೂರಾರು ಜನ ಮುಸ್ಲಿಮರು ಭಾಗವಹಿಸಿದ್ದರು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಸೇರಿದಂತೆ ಹಲವು ಗಣ್ಯರು ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.
--
ಬಡವರಿಗೆ ಸಹಾಯಧನ
ಮುದಗಲ್: ಇಸ್ಲಾಂ ಧರ್ಮಕ್ಕೆ ಸೇರಿದ ಪ್ರತಿಯೊಬ್ಬರು ಪವಿತ್ರ ರಂಜಾನ್ ಹಬ್ಬದಲ್ಲಿ ತನ್ನ ಗಳಿಕೆ ಹಣದಲ್ಲಿ ಶೇಕಡಾ 2.5ರಷ್ಟನ್ನು ಜಕಾತ್ ರೂಪದಲ್ಲಿ ಬಡವರಿಗೆ, ದಿನ ದಲಿತರಿಗೆ ದಾನವಾಗಿ ನೀಡಬೇಕೆಂದು ಇಸ್ಲಾಂ ಧರ್ಮ ಹೇಳುತ್ತದೆ ಎಂದು ಸಮಾಜದ ಮುಖಂಡ ದಾವೂದ್ ಹೇಳಿದರು.
  ಸ್ಥಳೀಯ ಶಾಂತಿನಿಕೇತನ ಪ್ರೌಢ ಶಾಲೆಯಲ್ಲಿ ಮಂಗಳವಾರ ಅಲ್ ಹುಸೇನಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಬಡ ಮುಸ್ಲಿಂ ಕುಟುಂಬಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಂಜಾನ್ ಹಬ್ಬ ಕೇವಲ ಶ್ರೀಮಂತರಿಗೆ ಮಾತ್ರವಲ್ಲ, ಬಡವರೂ ಹಬ್ಬ ಆಚರಣೆ ಮಾಡಲಿ ಎಂಬ ಉದ್ದೇಶದಿಂದ ಪಟ್ಟಣದ ಅಲ್ ಹುಸೇನಿಯಾ ಚಾರಿಟಬಲ್ ಟ್ರಸ್ಟ್ 80 ಬಡ ಮುಸ್ಲಿಂ ಕುಟುಂಬಗಳನ್ನು ಆಯ್ಕೆ ಮಾಡಿ ಅವರಿಗೆ ಧನ ಸಹಾಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
  ಆಬೀದ್ ಹುಸೇನಿ ಮಾತನಾಡಿ, ಚಾರಿಟಬಲ್ ಟ್ರಸ್ಟ್ ಕೇವಲ ಬಡವರಿಗೆ ಸಹಾಯಧನ ನೀಡುವುದಲ್ಲದೇ ಯಾವುದೇ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಬಡವರ ವಿವಾಹ, ಬಡ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಅಮಾಯಕರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಮಾಜದ ಮುಖಂಡರ, ಸ್ನೇಹಿತರ ಸಹಾಯ, ಸಹಕಾರದ ಜೊತೆಗೆ ಮಾರ್ಗದರ್ಶನ ಅವಶ್ಯವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಲಿಂಗಸ್ಗೂರು ಎಪಿಎಂಸಿ ನಿರ್ದೇಶಕ ಎಸ್.ಆರ್. ರಸೂಲ್, ಪಪಂ ಮಾಜಿ ಸದಸ್ಯ ಸೈಯದ್ ಸಾಬ ಮಾತನಾಡಿದರು. ಪಪಂ ಅಧ್ಯಕ್ಷ ರಜ್ಜಬಲಿ ಹಳೆಪೇಟೆ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಮಂತ ನಾಗಲಾಪುರ, ಸದಸ್ಯರಾದ ಬಂದೇನವಾಜ್ ಬಡಿಗೇರ, ವೀರೇಶ ವಡ್ಡರ್, ಟ್ರಸ್ಟ್‌ನ ಪದಾಧಿಕಾರಿಗಳಾದ ರಷೀದ್ ಸಾಹೇಬ, ನ್ಯಾಮತುಲ್ಲ ಖಾದ್ರಿ, ಪಾಶಾಹುಸೇನಿ, ಜುಬೇರ್ ಪಾಶಾ, ಬಾಬಾ ಸಾಹೇಬ, ಯಾಸೀನ್ ಖಾದ್ರಿ, ಮಾಪಾಶಾ ದುಂದುಂ ಇದ್ದರು.
--
ಸಾಮೂಹಿಕ ನಮಾಜ್
ಸಿಂಧನೂರು: ಕಳೆದ ಒಂದು ತಿಂಗಳಿಂದ ಮುಸ್ಲಿಂ ಬಾಂಧವರು ಉಪವಾಸ ಮಾಡಿದ್ದು ಮಂಗಳವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾ, ಭಕ್ತಿಯಿಂದ ಪವಿತ್ರವಾದ ರಂಜಾನ್ ಹಬ್ಬವನ್ನು ಆಚರಿಸಿದರು. ನಗರದ ಬಪ್ಪೂರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ನಗರದ ಹಾಗೂ ತಾಲೂಕಿನ ತುರ್ವಿಹಾಳ, ಸಾಲುಗುಂದಾ, ಜವಳಗೇರಾ, ಸುಲ್ತಾನಪುರ, ಮುಕ್ಕುಂದ, ಗುಂಜಳ್ಳಿ, ತಿಮ್ಮಾಪುರ, ಬಪ್ಪೂರ ಮತ್ತಿತರ ಗ್ರಾಮದ ಮುಖಂಡರು ಮೈದಾನಕ್ಕೆ ಬಂದು ಪರಸ್ಪರ ಒಬ್ಬರನ್ನೊಬ್ಬರನ್ನು ಅಪ್ಪಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಇದೇ ವೇಳೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಾಂಧವರಿಗೆ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಮುಖಂಡರಾದ ರಾಜಶೇಖರ ಪಾಟೀಲ್, ಕೆ.ಕರಿಯಪ್ಪ, ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ ಅಭಿನಂದಿಸಿದರು. ನಗರಸಭೆ ಅಧ್ಯಕ್ಷ ಜಾಫರ್ ಜಾಗೀರದಾರ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿ ಮಲಿಕ್ ವಕೀಲ, ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ, ನಗರಸಭೆ ಸದಸ್ಯರಾದ ಮಹ್ಮದ್ ಎಕ್ಬಾಲ್‌ಸಾಬ್, ಪ್ರಭುರಾಜ, ಹಾಜಿ ಮಸ್ತಾನ್, ನನ್ನುಸಾಬ್ ಮೇಸ್ತ್ರಿ, ಶಿವು ಮಾಲಿಪಾಟೀಲ್, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ಹರೇಟನೂರು, ಜಿಪಂ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ಕೊಪ್ಪಳ ಕಾಂಗ್ರೆಸ್ ಯೂಥ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಮಾಜಿ ತಾಲೂಕು ಯೂಥ್ ಅಧ್ಯಕ್ಷ ಮುರ್ತುಜಾಸಾಬ್, ಪುರಸಭೆ ಮಾಜಿ ಸದಸ್ಯ ಶಿವಕುಮಾರ ಜವಳಿ, ಅಲ್ಲಮಪ್ರಭು, ಸಂಜಯ್ ಪಾಟೀಲ್, ಹನುಮಂತಪ್ಪ ಮುದ್ದಾಪೂರ ಸೇರಿದಂತೆ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!