ಲಿಂಗಸ್ಗೂರು: ಭೋವಿ ಅಭಿವೃದ್ಧಿ ನಿಗಮ ಅನುಷ್ಠಾನ ಹಾಗೂ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು.8ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿ ರಾಜ್ಯ ಜಂಟಿ ಕಾರ್ಯದರ್ಶಿ ರವಿಕುಮಾರಚಿಗರಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಭೋವಿ ಸಮಾಜ 50- 60 ಲಕ್ಷ ಜನಸಂಖ್ಯೆ ಹೊಂದಿದ್ದು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ತೀರ ಹಿಂದುಳಿದು ಅಸಂಘಟಿತ ದಲಿತ ಶ್ರಮಿಕ ಸಮಾಜವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಭೋವಿ ಅಭಿವೃದ್ಧಿ ನಿಗಮ ಘೋಷಣೆ ಮಾಡಿ ವಿಶೇಷ ಆಡಳಿತಾಧಿಕಾರಿಯನ್ನು ನೇಮಿಸಿ ಅನುದಾನ ಮೀಸಲಿಟ್ಟಿದ್ದರು. ಸದಾನಂದಗೌಡರು ಅಧಿವೇಶನದಲ್ಲಿ ನಿಗಮ ಪ್ರಕಟಿಸಿದರು. ಆದರೆ ಅಂದಿನಿಂದ ನಿಗಮ ತನ್ನ ಕಾರ್ಯಚಟುವಟಿಕೆ ಆರಂಭಿಸಿಲ್ಲ. ಈ ನಿಟ್ಟಿನಲ್ಲಿ ನಿಗಮ ಕೂಡಲೇ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು. ಸಿದ್ದರಾಮೇಶ್ವರ ಜಯಂತಿ ಸಾರ್ವತ್ರಿಕ ರಜೆ ಘೋಷಿಸಿ ಅಧ್ಯಯನ ಪೀಠ ಸ್ಥಾಪಿಸುವುದು ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.