ಮುದಗಲ್: ಪಟ್ಟಣ ಸಮೀಪದ ತಲೇಖಾನ್ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡಲು ಬೀದಿ ನಾಟಕ ಹಾಗೂ ಮಾಹಿತಿ ಕಾರ್ಯಗಾರ ನಡೆಯಿತು. 2013-14ನೇ ಸಾಲಿನ ಬಿಆರ್ಜಿಎಫ್ ಯೋಜನೆಯಡಿ ಜಿಪಂ, ತಾಪಂ, ಗ್ರಾಪಂ ತಲೇಖಾನ್ ಹಾಗೂ ಹಡಗಲಿ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನಗರದ ಡಾ. ಅಂಬೇಡ್ಕರ್ ಕಲಾ ತಂಡದ ವತಿಯಿಂದ ಯರದೊಡ್ಡಿ, ಹಡಗಲಿ, ಹಡಗಲಿ ತಾಂಡಾ, ತಲೇಖಾನ್, ದೇಸಾಯಿ ಬೋಗಾಪುರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛತೆ, ವಸತಿ, ತೆರೆದ ಕೊಳವೆಬಾವಿ ಮುಚ್ಚುವುದು ಸೇರಿದಂತೆ ವಿವಿಧ ಯೋಜನೆ, ಸೌಲಭ್ಯದ ಕುರಿತು ಕಿರು ಬೀದಿ ನಾಟಕದಲ್ಲಿ ತಂಡದ ಸದಸ್ಯರು ವಿವಿಧ ಬಗೆಯ ದೃಶ್ಯಾವಳಿ ಮತ್ತು ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಗ್ರಾಪಂ ಅಧ್ಯಕ್ಷ ಹನುಮಂತ ನಾಯ್ಕ, ಸದಸ್ಯರಾದ ಅಮರೇಶ, ದುರುಗಪ್ಪ, ಗಂಗಪ್ಪ, ಪಿಡಿಒ ಮಲ್ಲಿಕಾರ್ಜುನ ಸೇರಿದಂತೆ ಕಲಾ ತಂಡದ ಯುವಕರಾದ ಬಸವರಾಜ ಹಿರೇಮನಿ, ರೇಣುಕಪ್ಪ, ಬೀಮಣ್ಣ ಗೋನಾಳ, ನರಸಪ್ಪ ಕಡಬೂರ, ಬುಡ್ಡಪ್ಪ, ಶಿವಕುಮಾರ ಹಾಗೂ ಮುಖಂಡರು ಇದ್ದರು.