ಸೊರಬ: ತಾಲೂಕಿನ ಆನವಟ್ಟಿ ಸಮೀಪದ ಹಶ್ವಿಯಲ್ಲಿ ಮೊಸಳೆಯೊಂದು ದೊರೆತಿದ್ದು, ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
ಗುರುವಾರ ಬೆಳಗ್ಗೆ ಇಲ್ಲಿನ ಭದ್ರೇಗೌಡರ ಜಮೀನಿನಲ್ಲಿ ಗೊಬ್ಬರ ಹಾಕಲು ತೆರಳಿದ್ದ ಅವರ ಅಣ್ಣನ ಮಗ ಮಹೇಶ್ ಅವರಿಗೆ ಸಮೀಪದ ಪೊದೆಯಲ್ಲಿ ಶಬ್ಧವಾಗಿದ್ದನ್ನು ಆಲಿಸಿ, ಪರಿಶೀಲಿಸಿದಾಗ ಮೊಸಳೆ ಇರುವುದು ಪತ್ತೆಯಾಗಿದೆ.
ಕೂಡಲೆ ಚಿಕ್ಕಪ್ಪ ಭದ್ರೇಗೌಡ ಅವರನ್ನು ಕರೆತಂದ ಮಹೇಶ್ ಉಪಾಯದಿಂದ ಮೊಸಳೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಈ ಕುರಿತು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಇಲಾಖೆಯ ಅಧಿಕಾರಿ ಜಗದೀಶ್ ಆಗಮಿಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಹುತೇಕ ಮಳೆಗಾಲದಲ್ಲಿ ದಂಡಾವತಿ ನದಿಯಲ್ಲಿ ತೇಲಿ ಬಂದು ಕೆರೆಗೆ ಸೇರಿರುವ ಸಾಧ್ಯತೆ ಇದೆ. ಆಹಾರ ಅರಸಿ ಜಮೀನಿಗೆ ಬಂದಿರಬೇಕು ಎಂದು ಶಂಕಿಸಿರುವ ಅವರು, ಪ್ರಸ್ತುತ ಅಂಜನಾಪುರ ಜಲಾಶಯಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.