ಶಿವಮೊಗ್ಗ

ಸಂಶೋಧನೆಗೆ ಪ್ರೋತ್ಸಾಹ ಆಗತ್ಯ

ಶಿವಮೊಗ್ಗ: ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವಲ್ಲಿ ಮಾಡುವ ಪ್ರಯತ್ನದಷ್ಟೇ ವಿಜ್ಞಾನ ವಿಷಯದ ಸಂಶೋಧನಾ ಚಟುವಟಿಕೆಗಳಿಗೂ ಪ್ರೋತ್ಸಾಹಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಇನ್‌ಸ್ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಾಧಾರಿತ ಯೋಜನೆಗಳ ಸ್ಪರ್ಧಾ ಸಮಾರಂಭ ಉದ್ಘಾಟಿಸಿ  ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಸೈನ್ಸ್ ಹಬ್ ಆಗುವಲ್ಲಿ, ಮಕ್ಕಳ ಮತ್ತು ದೇಶದ ಅಭಿವೃದ್ಧಿ ದೃಷ್ಟಿಯಿಂದ ಶಿಕ್ಷಕರು ಮಕ್ಕಳ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾದುದು ಇಂದಿನ ತುರ್ತು ಅಗತ್ಯ ಎಂದರು.
ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ದಿನನಿತ್ಯ ಬಂಧಿಸಿಡುವ ಶಿಕ್ಷಣ ವ್ಯವಸ್ಥೆಯಂತಾಗಿದೆ. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿ ಗಳಿಸುವ ಗರಿಷ್ಠ ಅಂಕಗಳ ಮೇಲೆಯೇ ನಮ್ಮ ದೃಷ್ಟಿ ಇದೆ. ಆದರೆ, ಅವರ ಜ್ಞಾನ, ಬುದ್ದಿಮತ್ತೆ ಬಗ್ಗೆ ನಾವೆಂದೂ ಯೋಚಿಸುತ್ತಿಲ್ಲ ಎಂದರು.
ಪ್ರಸ್ತುತ ವಿಜ್ಞಾನಾಧಾರಿತ ವಸ್ತುಪ್ರದರ್ಶನ ನಿರೀಕ್ಷಿತ ತೃಪ್ತಿ ನೀಡಿಲ್ಲ. ಕೇವಲ ಸಿದ್ಧ ವಸ್ತುಗಳ ಪ್ರದರ್ಶನದಂತೆ ತೋರುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ, ಸಕಾಲಿಕವಾಗಿ ಪ್ರೋತ್ಸಾಹಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಗಳಿಸುವಂತೆ ಪ್ರೇರೇಪಿಸಲು ಪ್ರಯತ್ನಿಸಬೇಕು ಎಂದರು.
ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಧ್ಯಾಪಕ ಶ್ರೀಪತಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೇರೆಬೇರೆ ಕ್ಷೇತ್ರಗಳಲ್ಲಿ ತೋರುತ್ತಿರುವ ಆಸಕ್ತಿಯನ್ನು ವಿಜ್ಞಾನ ಸಂಶೋಧನಾ ಕ್ಷೇತ್ರಕ್ಕೂ ತೋರಬೇಕು. ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳು ವಿಫುಲವಾಗಿವೆ ಎಂದರು.
ಸಂಶೋಧನೆಯ ಫಲದಿಂದ ದೇಶದ ಉನ್ನತಿ ಮತ್ತು ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ. ಜ್ಞಾನಿಗಳಾದವರು ಸದಾ ಸಮಾಜದಲ್ಲಿ ಮುಂಚೂಣಿ ನಾಯಕರು ಹಾಗೂ ಆರ್ಥಿಕವಾಗಿ ಬಲಿಷ್ಟರೂ ಆಗಿರುತ್ತಾರೆ. ಭವಿಷ್ಯದ ದಿನಗಳಲ್ಲಿ ಇಂದಿನ ವಿದ್ಯಾರ್ಥಿಗಳಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧಿಸುವ ಮಹತ್ತರ ಉದ್ದೇಶದಿಂದ ಆರಂಭವಾಗಿರುವ ಈ ಯೋಜನೆ ಮತ್ತು ಅದರ ಅನುಷ್ಠಾನದ ಬಗೆಗೆ ಶಿಕ್ಷಕರು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಡಿಎಸ್‌ಇಆರ್‌ಟಿ ಸಹನಿರ್ದೇಶಕಿ ಜಿ.ಪಿ. ಚಂದ್ರಮ್ಮ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಸಿ. ಬಸವರಾಜ್, ಚಿತ್ರದುರ್ಗ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಕುಮಾರ್ ಅತಿಥಿಗಳಾಗಿದ್ದರು. ಡಯಟ್ ಪ್ರಾಚಾರ್ಯದಾರ ಗಾಯಿತ್ರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಂಜುನಾಥ ಸ್ವಾಗತಿಸಿದರು.
ಪಿ. ನಾಗರಾಜ್ ನಿರೂಪಿಸಿ, ಟಿ.ಎಂ. ಸತ್ಯನಾರಾಯಣ ವಂದಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT