ಹೊಸನಗರ: ಆಧುನಿಕ ಶಿಕ್ಷಣ ಎಂದರೆ ಗ್ಲಾಮರ್ ಅಲ್ಲ. ಆಧುನಿಕತೆ ಎಂದರೆ ನವೋದಯ. ಹಳತನ್ನು ಹೊಸತಾಗಿ ಪರಿವರ್ತಿಸುವ, ಅವಲೋಕಿಸುವ ವಿಧಾನ. ಇಂತಹ ಮಹತ್ವದ ಕಾರ್ಯಗಳಿಗೆ ನಮ್ಮ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ನಿವೃತ್ತ ಸೈನಿಕ ಕೃಷ್ಣಮೂರ್ತಿ ಹೇಳಿದರು.
ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲದಲ್ಲಿ ಆಯೋಜಿಸಿದ್ದ ವ್ಯಾಸ ಪೂರ್ಣಿಮೆ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಗಳಲ್ಲಿ ಪರಂಪರಾಗತವಾಗಿ ಬೆಳೆದು ಬಂದಿರುವ ನೈತಿಕ ಶಿಕ್ಷಣವನ್ನು ಮುಂದುವರೆಸಬೇಕು. ನೈತಿಕತೆ ಇಲ್ಲದ ಶಿಕ್ಷಣ ಮಕ್ಕಳನ್ನು ಅಧಃಪತನದತ್ತ ಕೊಂಡೊಯ್ಯುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಹನಿಯ ರವಿ, ಭಾರತೀಯ ಸಂಸ್ಕೃತಿ, ಪರಂಪರೆಯಿಂದ ಸಿಗುವ ಶಿಕ್ಷಣವೇ ನಿಜವಾದ ಶಿಕ್ಷಣ. ಮತ್ತೆ ಸಂಸ್ಕೃತಿ, ಪರಂಪರೆಯತ್ತ ಗಮನ ಹರಿಸುವುದರಿಂದ ಮಾತ್ರ ಅರಿವಿನ ಶಿಕ್ಷಣ ಪಡೆಯಲು ಸಾಧ್ಯ. ಶಿಕ್ಷಣ ಎಂದರೆ ಬದುಕನ್ನು ಅರಿಸುವುದಲ್ಲ. ಬದುಕನ್ನು ರೂಪಿಸುವುದು. ಅಂತಹ ಶಿಕ್ಷಣವನ್ನು ವ್ಯಾಸರ ಕಾವ್ಯಗಳೇ ಸಾರುತ್ತವೆ. ಅದರೆ ಇಂದು ವ್ಯಾಸರನ್ನು ನೆನಪಿಸುವ ಕಾರ್ಯ ಕೂಡ ಆಗದೇ ಇರುವುದು ವಿಷಾದನೀಯ ಎಂದರು.
ವ್ಯಾಸ ಮಹರ್ಷಿ ಗುರುಕುಲದ ಆಡಳಿತಾಧಿಕಾರಿ ಕೆ. ರಾಮಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಹೆಗ್ಡೆ, ಅನಂತಮೂರ್ತಿ ಗುಬ್ಬಿಗ, ಸಂಸ್ಥೆಯ ಕಾರ್ಯದರ್ಶಿ ರಶ್ಮಿ ಬಿ.ಎಚ್., ಮುಖ್ಯ ಶಿಕ್ಷಕ ಮಂಜುನಾಥ್ ಮರಾಠಿ, ಜುಂಜಪ್ಪ ಬಣಕಾರ್, ಖುರ್ಷಿದಾ, ವೀಣಾ ಹಾಗೂ ಪೋಷಕರು ಉಪಸ್ಥಿತರಿದ್ದರು.