ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ, ಆತಂಕ ಬೇಡ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾಂಕಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ 40 ಕೋಟಿ ಬಂದಿದೆ. ಹೆಚ್ಚಿನ ಹಣದ ಅವಶ್ಯಕತೆ ಇದ್ದರೆ ಮತ್ತೆ ತರಿಸಲಾಗುತ್ತದೆ. ಹೀಗಾಗಿ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಡಿಸಿಸಿ ಬ್ಯಾಂಕ್ 1 ಸಾವಿರ ಕೋಟಿ ವಹಿವಾಟನ್ನು ಹೊಂದಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ. ಯಾರೂ ಕೂಡ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಕೆಲವು ವ್ಯಕ್ತಿಗಳು ದುರುದ್ದೇಶಪೂರ್ವಕ ವದಂತಿಗಳನ್ನು ಹರಿಯಬಿಡುತ್ತಿರುವುದು ಗಮನಕ್ಕೆ ಬಂದಿದೆ. ಅದರಿಂದಾಗಿ ಗ್ರಾಹಕರು ಆತಂಕಿತರಾಗಿದ್ದಾರೆ. ಆದರೆ ಯಾವುದೇ ಠೇವಣಿ ಹಣವನ್ನು ಕಳೆದುಕೊಳ್ಳುವ ಸಂದರ್ಭ ಇಲ್ಲ. ಬ್ಯಾಂಕ್ ಮುಳುಗುವ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದರು.
ಈಗ ರೈತರಿಗೆ ಸಾಲ ನೀಡುವ ಸಮಯ, ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಅಪೆಕ್ಸ್ ಬ್ಯಾಂಕ್‌ನಿಂದ ಅಗತ್ಯದಷ್ಟು ಹಣ ಲಭ್ಯವಾಗಿದೆ. ಹಗರಣದ ಹೊರತಾಗಿ ಬೇರೆ ಯಾವುದೇ ಸಮಸ್ಯೆ ಬ್ಯಾಂಕ್‌ನಲ್ಲಿ ಕಂಡುಬಂದಿಲ್ಲ. ಹಾಗಾಗಿ ಗ್ರಾಹಕರು ಠೇವಣಿ ಹಿಂತೆಗೆತಕ್ಕೆ ಮುಂದಾಗಬಾರದು ಎಂದು ಮನವಿಮಾಡುವುದಾಗಿ ತಿಳಿಸಿದರು.
ಮತ್ತೊಂದು ಶಾಖೆ
ವ್ಯವಸ್ಥಾಪಕ ಬಂಧನ
ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಶಾಖೆಯ ವ್ಯವಸ್ಥಾಪಕ ಬಂಧಿತರಾಗಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 19ಕ್ಕೆ ಏರಿದೆ. ಮಂಗಳವಾರ ಡಿಸಿಐಬಿ ಪೊಲೀಸರು ಮುಖ್ಯ ಕಚೇರಿ ಪಕ್ಕದಲ್ಲಿರುವ ಶಾಖೆ ವ್ಯವಸ್ಥಾಪಕ ರಾಮಚಂದ್ರಪ್ಪ ಅವರನ್ನು ಬಂಧಿಸಿದರು. ಗಾಂಧಿ ಬಜಾರ್ ಶಾಖೆಯ ಬಂಧಿತ ವ್ಯವಸ್ಥಾಪಕಿ ಶೋಭಾ ಅವರ ಕಡೆಯವರಿಗೆ ಬಂಗಾರದ ಮೌಲ್ಯಕ್ಕಿಂತ ಹೆಚ್ಚು ಸಾಲ ನೀಡಿದರೆಂಬ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.