ಶಿವಮೊಗ್ಗ: ಜಲಾಶಯದ ಕೋಡಿಯಲ್ಲಿ ಹೊಸನಗರ ತಾಲೂಕು ಚಾಣಬೈಲು ನಿವಾಸಿ ಮಂಜಪ್ಪ (52) ಎಂಬವರು ಕೊಚ್ಚಿಹೋಗಿ ಮೃತಪಟ್ಟ ಪ್ರಸಂಗ ಆಯನೂರು ಹೋಬಳಿ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹಳ್ಳ ಹೊಸಕೆರೆಯಲ್ಲಿ ನಡೆದಿದೆ.
ಸಿರಿಗೆರೆ ಗ್ರಾಮಕ್ಕೆ ಬ್ಯಾಂಕಿನಿಂದ ಸಾಲ ಪಡೆಯುವ ಸಲುವಾಗಿ ಆಗಮಿಸಿದ್ದ ಮಂಜಪ್ಪ ವಾಪಸ್ ಮನೆಗೆ ತೆರಳುವಾಗ ಸಂಪಿಗೆಹಳ್ಳ ನಿಲ್ದಾಣದಲ್ಲಿ ಬಸ್ ಇಳಿದು ಸೀಗೆಹಳ್ಳ ಜಲಾಶಯದ ದಂಡೆ ಮೇಲೆ ನಡೆದು ಹೋಗುತ್ತಿದ್ದರು. ಈ ಸಂದರ್ಭ ದುರ್ಘಟನೆ ನಡೆದಿದೆ. 3 ದಿನಗಳಿಂದ ಹುಡುಕಾಡಿದರೂ ಮಂಜಪ್ಪ ಪತ್ತೆ ಆಗಿರಲಿಲ್ಲ. ಮಂಗಳವಾರ ಅದೇ ಸ್ಥಳದಲ್ಲಿ ಶವ ತೇಲುತ್ತಿದ್ದುದನ್ನು ಗ್ರಾಮಸ್ಥರು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2.50 ಲಕ್ಷ ಮೌಲ್ಯದ ಆಭರಣ ಲೂಟಿ
ಸಾಗರ: ಪಟ್ಟಣದ ಸತ್ಯನಾರಾಯಣಸ್ವಾಮಿ ದೇವಸ್ಥಾನ ರಸ್ತೆಯ ಶಶಿಕಾಂತ್ ಎಂಬುವವರ ಮನೆಯಲ್ಲಿ ಸುಮಾರು 2.50 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ವಸ್ತು ಕಳ್ಳತನವಾಗಿದೆ.
ಕೃಷಿಕ ಶಶಿಕಾಂತ್ ಮತ್ತವರ ಕುಟುಂಬ ಹದಿನೈದು ದಿನಗಳ ಹಿಂದೆ ಆಂದ್ರಪ್ರದೇಶದ ಗುಂಟೂರಿನ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಮಂಗಳವಾರ ಶಶಿಕಾಂತ್ ಕುಟುಂಬ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿದ ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಬೀರು ಹಾಗೂ ತಿಜೋರಿ ಒಡೆದು ಸುಮಾರು 2.50 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ದೋಚಿದ್ದಾರೆ. ಈ ಸಂಬಂಧ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಶಶಿಕಾಂತ್ ಪೇಟೆಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಮತ್ತವರ ತಂಡ ತನಿಖೆ ಕೈಗೊಂಡಿದ್ದಾರೆ.