ಸಾಗರ: ತಾಲೂಕಿನಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಮಂಗಳವಾರ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಳಗುಪ್ಪ ಹೋಬಳಿಯ ಸೈದೂರು, ಬೀಸನಗದ್ದೆ, ಕಣಸೆ, ಲಿಂಗನಕಣಿವೆ, ಮಂಡಗಳಲೆ, ಸೈದೂರು, ಕಾಗೋಡು ಇನ್ನಿತರೆ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ, ನೆರೆಯಿಂದ ಬೀಸನಗದ್ದೆ ಗ್ರಾಮ ಪೂರ್ಣ ಜಲಾವೃತವಾಗಿ 15 ದಿನ ಕಳೆದಿದೆ. ಗ್ರಾಮಕ್ಕೆ ಉದ್ಯೋಗಖಾತ್ರಿ ಯೋಜನೆಯಡಿ 20 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅದು ಸಹ ನೆರೆಯಿಂದ ಮುಚ್ಚಿ ಹೋಗಿದೆ. ಈ ಭಾಗಕ್ಕೆ ಶಾಶ್ವತ ರಸ್ತೆ ನಿರ್ಮಾಣಕ್ಕಾಗಿ ಈ ಭಾಗದ ಶಾಸಕ ಮಧು ಬಂಗಾರಪ್ಪ 30 ಲಕ್ಷ ಕೊಡುವ ಭರವಸೆ ನೀಡಿದ್ದಾರೆ. ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಣಸೆ ಹೊಳೆ, ಮಾವಿನಹೊಳೆ ಹಾಗೂ ವರದಾನದಿ ಮೂರು ಸೇರುವುದರಿಂದ ಈ ರೀತಿ ನೆರೆ ಉಂಟಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ನೀರು ಮುಂದೆ ಚಂದ್ರಗುತ್ತಿ ಮಾರ್ಗವಾಗಿ ಕೃಷ್ಣನದಿ ಸೇರುವುದರಿಂದ ಕಾನೂನಿನ ತೊಡಕಿನಿಂದಾಗಿ ನೀರನ್ನು ಶರಾವತಿ ನದಿಗೆ ತಿರುಗಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ತಾತ್ಕಾಲಿಕ ಪರಿಹಾರ ಕಲ್ಪಿಸುವ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಈಗಾಗಲೆ ನೆರೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ತಾಲೂಕಿಗೆ25 ಲಕ್ಷ ಬಿಡುಗಡೆ ಮಾಡಿದೆ. ಕಳೆದ ವರ್ಷ ಬೆಳೆನಷ್ಟ ಪರಿಹಾರವನ್ನು ವಿಳಂಬ ಮಾಡದೆ ವಿತರಿಸಲಾಗಿತ್ತು. ಈ ಬಾರಿಯೂ ರೈತರಿಗೆ ಪರಿಹಾರ ಧನವನ್ನು ಶೀಘ್ರವಾಗಿ ನೀಡಲಾಗುವುದು. ಭತ್ತಕ್ಕೆ ಹೆಕ್ಟೇರಿಗೆ 4800 ಪರಿಹಾರ ನೀಡಲಾಗುತ್ತಿದ್ದು, ಅದನ್ನು ಇನ್ನಷ್ಟು ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ತಕ್ಷಣ ಪರಿಹಾರಧನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುವುದು. ಜಮೀನಿಗೆ ಹಾನಿ, ಮನೆ ಕುಸಿತ ಪ್ರಕರಣಗಳಲ್ಲಿ ಪರಿಹಾರ ನೀಡಲು ಹಣ ಬಿಡುಗಡೆಯಾಗಿದೆ. ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು, ಇದರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಹಣಕಾಸಿನ ತೊಂದರೆ ಇಲ್ಲ ಎಂದು ಹೇಳಿದರು.
ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದರು.
ಅತಿವೃಷ್ಟಿ ವರದಿ ತಯಾರಿಗೆ ಆದೇಶ
ಸಾಗರ: ಅತಿವೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕಾಗಿರುವುದರಿಂದ ತಕ್ಷಣ ವರದಿ ತಯಾರಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅಧಿಕಾರಿಗಳಿಗೆ ಆದೇಶಿಸಿದರು. ನೆರೆ ಹಿನ್ನೆಲೆಯಲ್ಲಿ ಇಲ್ಲಿನ ತಾಪಂ ಸಭಾಂಗಣದಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಆಗಿರುವ ಹಾನಿ ಕುರಿತು ವರದಿ ತಯಾರಿಸಬೇಕು. ಪ್ರತಿ ಹೋಬಳಿಗೂ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.
ಅಧಿಕಾರಿಗಳು ವರದಿ ತಯಾರಿಸುವಾಗ ಸ್ಥಳೀಯ ಜನಪ್ರತಿನಿಧಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅಧಿಕಾರಿಗಳು ಪರಸ್ಪರ ಚರ್ಚಿಸಿ ವರದಿ ತಯಾರಿಸಬೇಕು. ಯಾವುದೇ ಕಾರಣಕ್ಕೂ ಸಂತ್ರಸ್ತರಿಗೆ ನಷ್ಟವಾಗಬಾರದು ಎಂದು ತಾಕೀತು ಮಾಡಿದರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಪ್ರಥಮ ವರದಿಯಂತೆ ತಾಲೂಕಿನಲ್ಲಿ 4335 ಎಕರೆ ಜಮೀನು ಜಲಾವೃತವಾಗಿದ್ದು ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ವರದಿ ತಯಾರಿಸುವಂತೆ ಹೇಳಿದರು. ರೆವಿನ್ಯೂ ಇನ್ಸ್‌ಪೆಕ್ಟರ್‌ಗಳಿಗೆ ತರಬೇತಿ ಹಮ್ಮಿಕೊಂಡಿರುವ ಸಂಬಂಧ ಡಿಸಿ ಜತೆ ಮಾತನಾಡಿದ ಕಾಗೋಡು, ಇಲ್ಲಿ ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭ ಯಾವುದೆ ತರಬೇತಿಗೆ ನೇಮಿಸಿಕೊಳ್ಳಬೇಡಿ ಎಂದು ಸೂಚನೆ ನೀಡಿದರು.