ಹೊಸನಗರ: ಡಿಸಿಸಿ ಬ್ಯಾಂಕ್ ಮುಚ್ಚಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕೆಲ ಪಟ್ಟಭದ್ರ ಸಹಕಾರಿಗಳು ಆರೋಪಿಸಿದ್ದು ಸತ್ಯಕ್ಕೆ ದೂರವಾಗಿದೆ. ಇವರ ಆರೋಪದಲ್ಲಿ ಹುರುಳಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಹಾದಿಮನೆ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಅವ್ಯಹಾರ ಬಗ್ಗೆ ಕಾನೂನುಬದ್ಧ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡರ ಬಂಧನದಲ್ಲಿ ಆರಗ ಜ್ಞಾನೇಂದ್ರ ಪಾತ್ರವಿಲ್ಲ. ಅವ್ಯವಹಾರದ ತನಿಖೆಗೆ ಈ ಹಿಂದೆಯೂ ಒತ್ತಾಯಿದ್ದಾರೆ. ಈಗಲೂ ಒತ್ತಾಯಿಸುತ್ತಾರೆ ಎಂದರು. ಜಿಪಂ ಸದಸ್ಯೆ ಶುಭಾಕೃಷ್ಣ, ತಾಪಂ ಸದಸ್ಯೆ ನಾಗರತ್ನ, ಇತರರಿದ್ದರು.
ತಪ್ಪು ಸಾಬೀತಾದಲ್ಲಿ ಕ್ರಮ ಕೈಗೊಳ್ಳಲಿ: ಮಣಿ ಹೆಗಡೆ
ಶಿವಮೊಗ್ಗ: ಡಿಸಿಸಿಬಿ ಅಧ್ಯಕ್ಷ ಮಂಜುನಾಥ ಗೌಡರ ವಿರುದ್ಧ ರಾಜಕೀಯ ದ್ವೇಷವಿದ್ದರೆ, ಅವರು ತಪ್ಪು ಮಾಡಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲಿ ಎಂದು ತೀರ್ಥಹಳ್ಳಿ ಬಗರ್ ಹುಕುಂ ಹೋರಾಟ ಸಮಿತಿ ಸಂಚಾಲಕ ಎಂ.ಜಿ. ಮಣಿ ಹೆಗಡೆ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರು ರಾಜಕೀಯ ದ್ವೇಷ ಮಂಜುನಾಥ ಗೌಡರ ಬಂಧನಕ್ಕೆ ಕಾರಣವಾಗಿದೆ. ಯಾರೋ ಒಬ್ಬರು ನೀಡಿದ ಹೇಳಿಕೆ ಆಧಾರದಿಂದ ಬಂಧಿಸಲಾಗಿದೆ. ನಂತರ ಪೊಲೀಸರು ಸಾಕ್ಷಿ ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ ಇಡೀ ಸಹಕಾರ ವ್ಯವಸ್ಥೆ ಹಾಳು ಮಾಡುತ್ತಿರುವುದೇಕೆ, ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ದೂಡುತ್ತಿರುವುದೇಕೆ? ವಿನಾಕಾರಣ ಗೊಂದಲ ಸೃಷ್ಟಿಸಿದರೆ ರೈತರು ಅನಿವಾರ್ಯವಾಗಿ ಖಾಸಗಿ ಲೇವಾದೇವಿಯವರಿಂದ ಸಾಲ ಪಡೆಯಬೇಕಾಗುತ್ತದೆ. ಇದೇ ಷಡ್ಯಂತ್ರ ನಡೆಸಿದವರ ಉದ್ದೇಶ. ಗೌಡರ ಬಂಧನದ ನಂತರ ರು. 80 ಕೋಟಿಗೂ ಹೆಚ್ಚು ಠೇವಣಿ ಹಣ ಹಿಂಪಡೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಈ ಬಗ್ಗೆ ಗಮನಿಸಬೇಕು ಎಂದರು. ನಾಕುಂಜಿ ಸುಧಾಕರ, ಗರ್ತಿಕೆರೆ ಬಷೀರ್ ಅಹ್ಮದ್, ಸಚಿನ್ ಹೆಗಡೆ ಇದ್ದರು.