ಶಿಕಾರಿಪುರ: ಒಂದು ಕಾಲದಲ್ಲಿ ಕೇವಲ ಶೆಟ್ರ ಭಟ್ರ ಪಕ್ಷವಾಗಿದ್ದ ಬಿಜೆಪಿ ಇದೀಗ ಎಲ್ಲ ವರ್ಗದ ಜನತೆಯ ಪರವಾದ ಹೋರಾಟ, ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಯಿಂದಾಗಿ ಎಲ್ಲಾ ವರ್ಗದ ಪಕ್ಷವಾಗಿ ರೂಪುಗೊಂಡಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ತಾಲೂಕಿನ ಮಟ್ಟಿಕೋಟೆ, ನಿಂಬೇಗೊಂದಿ, ಹಳೆಮುಗುಳಗೆರೆ, ಹೊಸಮುಗುಳಗೆರೆ ಮತ್ತಿತರ ಕಡೆಗಳಲ್ಲಿ ಮಂಗಳವಾರ ಸಂಜೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ನಂತರದಲ್ಲಿ ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ನಗರ ಮಟ್ಟದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೋಮುಗಲಭೆ ಹೆಚ್ಚಾಗಲಿದೆ ಎಂದು ಭಯಪಟ್ಟಿದ್ದ ಅಲ್ಪಸಂಖ್ಯಾತರು ಇದೀಗ ರಾಜ್ಯ ಹಾಗೂ ಕೇಂದ್ರದಲ್ಲಿನ ಬಿಜೆಪಿ ಆಡಳಿತದಿಂದ ನೆಮ್ಮದಿ ಕಂಡುಕೊಂಡಿದ್ದಾರೆ. ಗುಜರಾತ್ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಗಲಭೆ ನಡೆದ ಉದಾಹರಣೆಗಳೇ ಇಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತ ವರ್ಗ ಬಿಜೆಪಿಯನ್ನು ಹೆಚ್ಚಿನ ರೀತಿಯಲ್ಲಿ ಬೆಂಬಲಿಸುತ್ತಿದೆ ಎಂದರು.
ತಾಲೂಕಿನಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ಅನುಮಾನವಿಲ್ಲ. ಬಿಜೆಪಿ ಮತದಾರರನ್ನು ಹೊರತುಪಡಿಸಿ ಕಾಂಗ್ರೆಸ್ ಜನತಾದಳದ ಮತದಾರರನ್ನು ಪಕ್ಷದ ಸಾಧನೆ ವಿವರಿಸಿ ಸೆಳೆಯುವಲ್ಲಿ ವಿಶೇಷ ಗಮನಹರಿಸಬೇಕು. ಈ ಸಂದರ್ಭ ಸ್ಥಳೀಯವಾಗಿ ಪ್ರತಿ ಕಾರ್ಯಕರ್ತರ ಪ್ರಾಬಲ್ಯ ನಾಯಕತ್ವ ರೂಪುಗೊಳ್ಳಲು ಬಹುದೊಡ್ಡ ಅವಕಾಶ ಎಂದರು.
ಪಕ್ಷದ ಸಭೆ, ಸಮಾರಂಭ, ಬೈಕ್ ರ್ಯಾಲಿ, ಮೆರವಣಿಗೆ ಕೇವಲ ವಾತಾವರಣ ಸೃಷ್ಠಿಸಬಹುದು. ಬೂತ್ ಮಟ್ಟದಲ್ಲಿನ ಪ್ರತಿ ವಿರೋಧಿಗಳ ಮನೆಗೆ ತೆರಳಿ ಸಾವಧಾನದಿಂದ ವಿಶ್ವಾಸಗಳಿಸಿ ಮತಗಳಿಸಬೇಕು. ಒಂದು ಕಾಲದಲ್ಲಿ ಕೇವಲ ಶೆಟ್ರ ಭಟ್ರ ಪಕ್ಷವಾಗಿದ್ದ ಬಿಜೆಪಿ ಅಧಿಕಾರವಧಿಯಲ್ಲಿ ಕಾಗಿನಲ್ಲಿ ಶ್ರೀಗಳ ನೇತೃತ್ವದಲ್ಲಿನ 35ಕ್ಕೂ ಅಧಿಕ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಕೋರಿಕೆ ಮೇರೆಗೆ 90 ಕೋಟಿ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇದರಿಂದಾಗಿ ಬಿಜೆಪಿ ಎಲ್ಲಾ ವರ್ಗದ ಜನತೆ ಪಕ್ಷವಾಗಿ ರೂಪುಗೊಂಡಿದೆ ಎಂದರು.
ರಾಜ್ಯದ 3 ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಪಕ್ಷ ಪುನಃ ಅಧಿಕಾರಗಳಿಸಲು ತಾಲೂಕಿನಲ್ಲಿ ಲಕ್ಷ ಅಂತರದಲ್ಲಿ ಜಯಗಳಿಸುವ ಅಗತ್ಯವಿದೆ ಎಂದರು.
ಜಂಬೂರು ಗೋಪಿ ಕುಮಾರ್, ಚನ್ನಹಳ್ಳಿ ಮಹಾಲಿಂಗಪ್ಪ, ಪಾರಿವಾಳದ ಸುರೇಶ ಮತ್ತಿತರ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ನಗರ ಕಾರ್ಯದರ್ಶಿ ಮೋಹನ್, ತಾ.ಪಂ ಸದಸ್ಯ ಹನುಮಂತಪ್ಪ, ಮುಖಂಡ ಗುರುಮೂರ್ತಿ, ಬಿ.ಡಿ ಭೂಕಾಂತ್, ಹಾಲಪ್ಪ, ಮೋಹನ್, ಸುಕೇಂದ್ರಪ್ಪ, ವಸಂತಗೌಡ, ಬೆಣ್ಣೆ ದೇವೇಂದ್ರಪ್ಪ, ಯೋಗಿಶ್ ಸಂದೀಮನೆ,ಕಬಾಡಿ ರಾಜು, ಪುರಸಭಾ ಉಪಾಧ್ಯಕ್ಷ ಸೈಯದ್ ಪೀರ್, ಸದಸ್ಯ ಪಾಲಾಕ್ಷಪ್ಪ, ಎಂ.ಎಚ್.ರವಿ, ಪಾರಿವಾಳದ ಶಿವಶಂಕರಪ್ಪ, ಪ್ರವೀಣ್ ಶೆಟ್ಟಿ, ಬೇಗೂರು ಅಮಾನುಲ್ಲಾ ಮತ್ತಿತರರು ಉಪಸ್ಥಿತರಿದ್ದರು.