ಜೋಗಫಾಲ್ಸ್: ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದಲ್ಲಿ 1805 ಅಡಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಮುಖ್ಯ ಎಂಜಿನಿಯರ್ ರಾಜಮುಡಿ, ಜಿ. ಹನುಮಂತಪ್ಪ, ಅಧೀಕ್ಷಕ ಎಂಜಿನಿಯರ್ ಶಿವಾಜಿರಾವ್, ಮೋಹನ್ ಸ್ಫೂರ್ತಿ ಮತ್ತು ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವೇರಿಸಿದರು.
ನಾಡಿಗೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಈಚೆಗಿನ 20 ದಿನದ ಮಳೆಯಲ್ಲಿ 60 ಅಡಿಗಳಷ್ಟು ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದು ಸಂಗ್ರಹವಾಗಿದೆ ಎಂದು ಕೆಪಿಸಿ ಶರಾವತಿ ಯೋಜನಾ ಪ್ರದೇಶದ ಮುಖ್ಯ ಎಂಜಿನಿಯರ್ ರಾಜಮುಡಿ ಮತ್ತು ಜಿ. ಹನುಮಂತಪ್ಪ ಮಾಹಿತಿ ನೀಡಿದರು.
ಸಮೀಪದ ಲಿಂಗನಮಕ್ಕಿ ಜಲಾಶಯದ ಕ್ರಸ್ಟ್‌ಗೇಟ್ ಮಟ್ಟಕ್ಕೆ ನೀರು ಸಂಗ್ರಹವಾದ ಕೂಡಲೇ ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಪದ್ಧತಿಯಂತೆ ಗಂಗಾಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಜಲಾಶಯದಲ್ಲಿ 1805ಅಡಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ 14ಅಡಿಗಳಷ್ಟು ನೀರಿನ ಅಗತ್ಯವಿದೆ. ಜಲಾನಯನದ ಹಿನ್ನೀರ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಕಾರಣ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದೆ. 1819ರ ಗರಿಷ್ಠ ಮಟ್ಟಕ್ಕೆ ನೀರು ಸಮೀಪಿಸುತ್ತಿದ್ದಂತೆ, ನೀರಿನ ಒಳಹರಿವನ್ನು ಪರಿಗಣಿಸಿ ಕೇಂದ್ರ ಕಚೇರಿಯ ನಿರ್ದೇಶನ ಮೇರೆಗೆ ಜಲಾಶಯದಿಂದ ನೀರನ್ನು ಹೊರಹಾಯಿಸಲು ಸಾಧ್ಯತೆಯಿದೆ ಎಂದು ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದರು.
ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಪ್ರತಿ ಅಡಿ ನೀರನ್ನು ವ್ಯಯ ಮಾಡದೇ ಅತ್ಯಂತ ಜಾಗರೂಕತೆಯಿಂದ ವಿದ್ಯುತ್ ಬಳಕೆಗೆ ಉಪಯೋಗಿಸಿ ಕೊಳ್ಳಲಾಗುವುದು ಎಂದು ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಹನುಮಂತಪ್ಪ ಹೇಳಿದರು.
ಅಧೀಕ್ಷಕ ಎಂಜಿನಿಯರ್ ಜಿ. ಶಿವಾಜಿರಾವ್, ಪಿ. ಶಿವಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ. ಮಜೀದ್, ಮಧುಸೂದನ್, ಎಜಿಎಂ ವಿಜಯೇಂದ್ರ ಮತ್ತು ವಿಭಾಗದ ಅಧಿಕಾರಿಗಳು ಇದ್ದರು.