ಸೊರಬ: ಜಿಲ್ಲಾ ಕೆಡಿಪಿ ಸಭೆಯಲ್ಲಿ ಸೂಕ್ತ ದಾಖಲೆ ಒದಗಿಸಿದರೆ ತಕ್ಷಣವೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದ ತಹಸೀಲ್ದಾರ್ ಮಂಜೂರಾದ ಹಣವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸದೆ ಬಾಕಿ ಉಳಿಸಿಕೊಂಡಿದ್ದು, ಈಗ ಜಿಲ್ಲಾಡಳಿತದಲ್ಲಿ ಹಣವಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
ಪಟ್ಟಣದ ಶಾಸಕರ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪ್ರಕೃತಿ ವಿಕೋಪ, ನೆರೆ ಪರಿಹಾರದ ನಿಧಿ ಅನುದಾನ ಬಿಡುಗಡೆ ಮಾಡುವಲ್ಲಿ ಕಂದಾಯ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು ವಿಭಿನ್ನ ಹೇಳಿಕೆ ನೀಡುವ ಮೂಲಕ ಶಾಸಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 2013-14ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ತಾಲೂಕಿನಾದ್ಯಂತ ರಸ್ತೆ, ಕೆರೆ ಕೋಡಿಗಳು, ಸಾರ್ವಜನಿಕ ಸ್ವತ್ತು ಹಾನಿಯಾಗಿದ್ದು, ಅವುಗಳ ದುರಸ್ತಿಗಾಗಿ ಕಂದಾಯ ಮಂತ್ರಿಗಳನ್ನು ವಿಚಾರಿಸಲಾಗಿ ಇನ್ನೂ 7 ಕೋಟಿ ಅನುದಾನ ಉಳಿದಿದೆ ಎಂದು ತಿಳಿಸಿದ್ದಾರೆ.
ಹಣವಿದ್ದರೂ ಸುಳ್ಳು ಹೇಳಿ ಶಾಸಕರನ್ನು ದಾರಿ ತಪ್ಪಿಸುವ ಮೂಲಕ ಜಿಲ್ಲಾಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದಲ್ಲದೇ ಪರಿಹಾರ ನೀಡಲು ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಿ, ಹಾನಿಗೊಳಗಾದ ಪ್ರದೇಶ ಹಾಗೂ ವೆಚ್ಚವಾಗುವ ಹಣದ ಬಗ್ಗೆ ಮಾಹಿತಿ ಕೇಳಲಾಗಿದೆ.
ಆದರೆ ತಹಸೀಲ್ದಾರ್ ಕಚೇರಿಗೆ ಕೆಲವು ಕಾಮಗಾರಿಗಳ ಅಗತ್ಯವಿದೆಯೇ ಎಂದು ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿದ್ದಾರೆ. ಇದು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತೋರಿಸುತ್ತಿರುವ ಅಗೌರವ ಎಂದು ಕಿಡಿಕಾರಿದರು.
ತಾಪಂ ಪ್ರಭಾರೆ ಅಧ್ಯಕ್ಷೆ ನೀಲಮ್ಮ ಸುರೇಶ್, ತಾಪಂ ಸದಸ್ಯರಾದ ಬಸವಲಿಂಗಪ್ಪ, ಬರಗಿ ನಿಂಗಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಪಾದ ಹೆಗಡೆ ನಿಸರಾಣಿ, ಶೇಖರ್, ಗಣಪತಿ ಹುಲ್ತಿಕೊಪ್ಪ, ಕೆ.ವಿ. ಗೌಡ, ಸಂಜೀವ್ ಲಕ್ಕವಳ್ಳಿ, ಮಂಜುನಾಥ, ಅಧಿಕಾರಿಗಳು ಇದ್ದರು.