ತ್ಯಾಗರ್ತಿ: ಸಾಗರದ ವಿವಿಧ ಕಡೆ ಕಾಣಿಸಿಕೊಂಡ ವಿಚಿತ್ರ ಹುಳು ತನ್ನ ವ್ಯಾಪ್ತಿಯನ್ನು ಇದೀಗ ಮತ್ತಷ್ಟು ವಿಸ್ತರಿಸಿರುವುದು ಕಂಡುಬಂದಿದೆ.
ಸಾಗರ ತಾಲೂಕಿನ ಕುಂಟುಗೋಡು ಗ್ರಾಮದ ಸೊಪ್ಪಿನ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ವಿಚಿತ್ರ ಹುಳು ನೀಚಡಿ ಹಾಗೂ ಚಿಕ್ಕಬಿಲಗುಂಜಿ ಗ್ರಾಮದ ಸೊಪ್ಪಿನ ಬೆಟ್ಟ ಮತ್ತು ಖುಷ್ಕಿ ಜಮೀನು ಪ್ರದೇಶಗಳಿಗೂ ವಿಸ್ತರಿಸಿಕೊಂಡಿದೆ.
ನೀಚಡಿ ಮತ್ತು ಚಿಕ್ಕಬಿಲಗುಂಜಿ ಗ್ರಾಮಗಳಲ್ಲಿ ಎನ್.ಪಿ.ಶ್ರೀಧರ ಮತ್ತು ಸುಬ್ಬರಾವ್ ಭಾಗವತ್ ಎಂಬುವರ ಖುಷ್ಕಿ ಜಮೀನುಗಳಲ್ಲಿ ಕಂಡುಬಂದಿದ್ದು, ಈ ವಿಚಿತ್ರ ಕೀಟಗಳು ಹೆಚ್ಚಾಗಿ ಮತ್ತಿ ಮತ್ತು ಹುಣಾಲು ಮರಗಳಲ್ಲಿ ಜೇನು ಹುಳುಗಳು ಗೂಡು ಕಟ್ಟಿದಂತೆ ನೂರಾರು ಮರಗಳನ್ನು ಆವರಿಸಿಕೊಂಡಿದೆ.
ಮನುಷ್ಯರು ಈ ಮರದ ಹತ್ತಿರ ಹೋದ ತಕ್ಷಣ ಹುಳುಗಳು ಮನುಷ್ಯನನ್ನು ಸುತ್ತುವರೆಯುವುದಲ್ಲದೇ ವಿಚಿತ್ರವಾದ ದ್ರವವನ್ನು ಸ್ರವಿಸಿ ಕಮಟು ವಾಸನೆ ಹರಡಿಸುತ್ತದೆ. ಈ ಹುಳಗಳು ವಿಶ್ರಾಂತ ಸ್ಥಿತಿಯಲ್ಲಿದ್ದು ಯಾವುದೇ ಆಹಾರ ಸೇವಿಸುತ್ತಿರುವ ಅಥವಾ ಮರಗಳಿಗೆ ಹಾನಿ ಮಾಡಿದ ಪ್ರಕರಣ ಕಂಡು ಬಂದಿರುವುದಿಲ್ಲ. ಆದರೂ ಸುತ್ತಮುತ್ತಲಿನ ಗ್ರಾಮಸ್ಥರು ಬೆಳೆಗಳಿಗೆ ಹಾನಿ ಮಾಡಬಹುದು ಎಂಬ ಆತಂಕದಿಂದ ಮತ್ತು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ತೋಟಗಾರಿಕಾ ಇಲಾಖೆ ತಜ್ಞರ ಪ್ರಕಾರ ಈ ಹುಳಗಳಿಗೆ ಸ್ಟಿಂಕ್‌ಬೆಗ್ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಉಡಂಗ ಮೌಂಟಾನಾ ಎಂದು ತಿಳಿಸಿದ್ದಾರೆ. ತ್ಯಾಗರ್ತಿ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಎಚ್.ಎನ್.ಶ್ರೀಪಾದರಾವ್ ಈ ಹುಳಗಳನ್ನು ವೀಕ್ಷಿಸಿ ಇದೊಂದು ವಿಚಿತ್ರ ರೀತಿಯ ಹುಳುವಾದರೂ ರೈತರು ಹೇಳುವಂತೆ ಈ ಹುಳಗಳು ಹಿಂದೆ ಬಿದಿರು ಗಿಡದಲ್ಲಿ ಕಾಣಿಸಿಕೊಂಡು ಹೂವಿನ ಮತ್ತು ಎಲೆಗಳ ರಸ ಹೀರುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಬಿದಿರು ನಾಶವಾಗಿರುವುದರಿಂದ ಈ ಹುಳಗಳು ಮತ್ತಿ, ಹುಣಾಲು, ಪರಿಗೆ, ನೇರಳೆ ಇನ್ನೂ ಹಲವಾರು ಮರಗಿಡಗಳಿಗೆ ವ್ಯಾಪಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ ಡಾ.ವಿಶ್ವನಾಥ ಪ್ರತಿಕ್ರಿಯಿಸಿ, ಈ ವಿಚಿತ್ರ ಕೀಟಗಳು ಸಾಗರ, ಸೊರಬ, ಶಿರಸಿ ಭಾಗಗಳಲ್ಲಿ ಕಂಡು ಬಂದಿದ್ದು ಈ ಹುಳಗಳು ಯಾವುದೇ ಬೆಳಗಳಿಗೆ ಹಾನಿ ಮಾಡಿದ ಬಗ್ಗೆ ಇದುವರೆಗೆ ವರದಿಯಾಗಿರುವುದಿಲ್ಲ. ರೈತರು ಆತಂಕಗೊಳಗಾಗುವುದು ಬೇಡ. ಈ ಹುಳುಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.