ಶಿಕಾರಿಪುರ: ಆಗಸ್ಟ್ 21 ರಂದು ನಡೆಯಲಿರುವ ಶಿಕಾರಿಪುರ ವಿಧಾನಸಭೆ ಉಪಚುನಾವಣೆಗೆ ಸಲ್ಲಿಸಲಾಗಿದ್ದ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದ ಬುಧವಾರ 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬಿಜೆಪಿಯಿಂದ ನಿರೀಕ್ಷೆಯಂತೆ ಯಡಿಯೂರಪ್ಪ ಪುತ್ರ ಮಾಜಿ ಸಂಸದ ರಾಘವೇಂದ್ರ ಸ್ಪರ್ಧಿಸಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಶಾಂತವೀರಪ್ಪಗೌಡ ಸ್ಪರ್ಧಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಶಾಂತವೀರಪ್ಪಗೌಡ 25 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿ ಬಿಎಸ್‌ವೈ ಪುತ್ರ ರಾಘವೇಂದ್ರ ವಿರುದ್ಧ 2 ನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅವರು ಬಹು ಎಚ್ಚರದಿಂದ ಪ್ರತಿ ಹೆಜ್ಜೆ ಹಾಕುತ್ತಿರುವುದು ಸ್ಪಷ್ಟ.
ಶಾಸಕರಾಗಿದ್ದ ಯಡಿಯೂರಪ್ಪ ರಾಜಕೀಯ ಸ್ಥಿತ್ಯಂತರದಿಂದಾಗಿ ಲೋಕಸಭೆಗೆ ಸ್ಪರ್ಧಿಸಿ 3.65 ಲಕ್ಷ ದಾಖಲೆ ಮತಗಳ ಅಂತರದಿಂದ ಜಯಗಳಿಸಿದ ನಂತರದಲ್ಲಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಅಭಿನಂದನಾ ಕಾರ್ಯಕ್ರಮದ ಮೂಲಕ ವಿಧಾನಸಭಾ ಚುನಾವಣೆಗೆ ಪುತ್ರ ರಾಘವೇಂದ್ರರ ಸ್ಪರ್ಧೆಗೆ ವೇದಿಕೆ ಸಿದ್ದಪಡಿಸಿದ್ದರು. ಈ ಮೂಲಕ ತಾಲೂಕಿನ ಎಲ್ಲಾ ಮತದಾರರನ್ನು ಸಂಪರ್ಕಿಸಿ ವಿಧಾನಸಭೆ ಚುನಾವಣೆ ತಾಲೀಮು ನಡೆಸಿದ್ದಾರೆ.
ಈ ಚುನಾವಣೆಯಲ್ಲಿ ಜನತಾದಳ ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌ಗೆ ಬೆಂಬಲಿಸುವ ನಿರ್ಣಯದಿಂದಾಗಿ ಕಾಂಗ್ರೆಸ್ ಪಾಳೆಯದಲ್ಲಿ ಉತ್ಸಾಹ ಇಮ್ಮಡಿಯಾಗಿದೆ.
ಈ ಚುನಾವಣೆ ಕೇವಲ ರಾಘವೇಂದ್ರ ಹಾಗೂ ಶಾಂತವೀರಪ್ಪಗೌಡರ ನಡುವಿನದಾಗಿರದೆ ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಹಾಗೂ ಪ್ರಬಲ ನಾಯಕ ಯಡಿಯೂರಪ್ಪನವರ ನಡುವಿನ ಸಮರ ಎಂದು ಬಿಂಬಿತವಾಗುತ್ತಿದೆ.
ಮಳೆರಾಯನ ಆರ್ಭಟ ಹೆಚ್ಚಾಗಿದ್ದರೂ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಕಳೆದ ವಾರ ಪೂರ್ತಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿ ಗಳಲ್ಲಿ ಪ್ರಚಾರ ಕಾರ್ಯ ಯಡಿಯೂರಪ್ಪ ಪೂರ್ಣಗೊಳಿಸಿದರು. ಕೆಜೆಪಿಯಿಂದ ಪುರಸಭಾ ಮಾಜಿ ಸದಸ್ಯ ಸಕಲೇಶ್ ಮಲ್ಮಾರ್, ನ್ಯಾಷನಲ್ ಡೆವಲಪ್‌ಮೆಂಟ್ ಪಕ್ಷದಿಂದ ಅಡ್ವೋಕೆಟ್ ಜಮೀರುದ್ದೀನ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ)ದಿಂದ ಯುವರಾಜ್, ಪಕ್ಷೇತರರಾಗಿ ಅನಿಲ್, ಡಿ.ಎಸ್. ಈಶ್ವರಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸ್ಪರ್ಧಿಸಿದ್ದಾರೆ.
ಎನ್ ಅರುಣ್, ಸುಪ್ರೀತ್ ಪೂಜಾರಿ ಹಾಗೂ ಶೇಖರಪ್ಪ ಹೂವಾಡಿಗ ನಾಮಪತ್ರ ಹಿಂಪಡೆದಿದ್ದಾರೆ. ಆಂಬ್ಯೋಸ್ ಡಿಮೆಲ್ಲೋ ಹಾಗೂ ಪದ್ಮರಾಜನ್ ನಾಮಪತ್ರ ತಿರಸ್ಕೃತಗೊಂಡಿದ್ದು ಅಂತಿಮವಾಗಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.