ಸಾಗರ: ಮಂಗಳವಾರ ರಾತ್ರಿ ಹಾಗೂ ಬುಧವಾರ ಇಡೀ ದಿನ ಸುರಿದ ವಿಪರೀತ ಮಳೆಯಿಂದಾಗಿ ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ. ಬುಧವಾರ ಬೆಳಿಗ್ಗೆ ಕೊನೆಗೊಂಡಂತೆ ತಾಲೂಕಿನಲ್ಲಿ 97 ಮಿ.ಮೀ. ಮಳೆಯಾಗಿದೆ.
ಪಟ್ಟಣದ ಗಂಗಾ ಪರಮೇಶ್ವರಿ ರಸ್ತೆಯಲ್ಲಿರುವ ಗೋಪಾಲ ಭಂಡಾರಿ ಎಂಬುವವರ ಮನೆಯ ಒಂದು ಬದಿ ಗೋಡೆ ಪೂರ್ಣ ಕುಸಿದಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಮನೆಯೊಳಗಿದ್ದ ಅನೇಕ ವಸ್ತುಗಳು ನಾಶವಾಗಿದೆ.
ತಾಲೂಕಿನ ಆನಂದಪುರಂನಲ್ಲಿ ನೂರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದೆ. ಹಕ್ರೆಕೊಪ್ಪ, ಗೇರುಬೀಸು, ಕರಡಿಮನೆ, ಲಕ್ಕವಳ್ಳಿ, ಗಿಳಾಲಗುಂಡಿ, ಕಣ್ಣೂರು, ಮಧ್ಯಕಣ್ಣೂರು ಭಾಗದಲ್ಲಿ ನೆರೆಯಿಂದ ಬತ್ತ, ಶುಂಠಿ ಇನ್ನಿತರ ಬೆಳೆಗಳು ನಾಶವಾಗಿದೆ. ತಾಳಗುಪ್ಪ ಹೋಬಳಿಯ ಸೈದೂರು, ಕಣಸೆ, ತಡಗಳಲೆ, ಕಾಗೋಡು, ತಟ್ಟೆಗುಂಡಿ ಗ್ರಾಮಗಳಲ್ಲಿ ವರದಾನದಿ ನೆರೆ ಪ್ರಮಾಣ ಮತ್ತಷ್ಟು ಜಾಸ್ತಿಯಾಗಿದೆ. ಬೀಸನಗದ್ದೆ ಗ್ರಾಮದ ಸುತ್ತ ಇನ್ನಷ್ಟು ನೀರು ಸಂಗ್ರಹವಾಗಿದ್ದು ಗ್ರಾಮವಾಸಿಗಳು ಕಳೆದ 15 ದಿನಗಳಿಂದ ಹೊರ ಪ್ರಪಂಚದ ಸಂಪರ್ಕ ಕಳೆದುಕೊಂಡಿದ್ದಾರೆ. ಕಾನ್ಲೆ ಸೈದೂರು ನಡುವಿನ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ.
ಆನಂದಪುರಂ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ ರೈತರು ತೀವ್ರ ಆತಂಕದಲ್ಲಿದ್ದಾರೆ. ಹೋಬಳಿಯ ಗಾಣಿಗನ ಕೆರೆ ಕೋಡಿ ಬಿದ್ದಿದ್ದು ಈ ಭಾಗದಲ್ಲಿನ ನೂರಾರು ಎಕರೆ ನಾಟಿ ಮಾಡಿದ ಜಮೀನು ಜಲಾವೃತವಾಗಿದೆ. ಕರಡಿಮನೆ-ಇರುವಕ್ಕಿ-ಗೇರುಬೀಸು-ಕೋಳೀಸಾಲು ನಡುವಿನ ರಸ್ತೆ ಸಂಪರ್ಕ ತುಂಡಾಗಿದೆ. ಲಕ್ಕವಳ್ಳಿಯ ಅಮ್ಮನಕೆರೆ ಕೋಡಿ ಒಡೆದ ಪರಿಣಾಮ ಹಳ್ಳೂರು, ತಂಗಳವಾಡಿ ಇನ್ನಿತರೆ ಪ್ರದೇಶದಲ್ಲಿನ ಭತ್ತ ಹಾಗೂ ಶುಂಠಿ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ನಂದಿಹೊಳೆ ಉಕ್ಕಿ ಹರಿಯುತ್ತಿರುವ ಪರಿಣಾಮ ಮೊದ್ಲೆಸರ, ಹಕ್ರೆಕೊಪ್ಪ ಭಾಗಗಳಿಗೆ ನೀರು ನುಗ್ಗಿ ನೂರಾರು ಎಕರೆ ಜಮೀನು ನೀರಿನಲ್ಲಿ ಮುಳುಗಿದ್ದು, ನಾಟಿ ಮಾಡಿದ ಬತ್ತದ ಫಸಲು ಕೊಚ್ಚಿಕೊಂಡು ಹೋಗಿದೆ. ಅಂಬ್ಲಿಗೊಳ ಜಲಾಶಯಕ್ಕೆ ನೀರು ಹರಿದು ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಕಣ್ಣೂರು ಹಾಗೂ ಮಧ್ಯ ಕಣ್ಣೂರಿನಲ್ಲಿ ನೆರೆ ಪರಿಣಾಮದಿಂದ 300ಕ್ಕೂ ಹೆಚ್ಚು ಎಕರೆ ಭತ್ತ, ಜೋಳ, ಶುಂಠಿ ಜಮೀನಿಗೆ ನೀರು ನುಗ್ಗಿದೆ.
ಆನಂದಪುರಂನ ಗುಂಡಿಗದ್ದೆಬೈಲಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಅಶೋಕ ರಸ್ತೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಲಕ್ಷ್ಮಮ್ಮ ಎಂಬುವವರ ಮನೆ ಕುಸಿದು ಬಿದ್ದಿದೆ.