ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆಂದು ಹೆಚ್ಚುವರಿಯಾಗಿ ಬೇಕಾಗಿದ್ದ ಭೂಮಿಯನ್ನು ಕೊಟ್ಟ ರೈತರನ್ನು ಸರ್ಕಾರ ಮರೆತೇ ಬಿಟ್ಟಿದೆ. ಇತ್ತ ಜಮೀನು ಇಲ್ಲದೆ, ಅತ್ತ ಪರಿಹಾರವೂ ಇಲ್ಲದೆ ಹತ್ತಾರು ರೈತರು ಇನ್ನೂ ಜಿಲ್ಲಾಧಿಕಾರಿ ಕಚೇರಿ ಸುತ್ತುತ್ತಾ ಚಪ್ಪಲಿ ಸವೆಸುತ್ತಲೇ ಇದ್ದಾರೆ.
240 ಕೋಟಿ ವೆಚ್ಚದ ಈ ಯೋಜನೆಯನ್ನು ಬಿಒಟಿ ಆಧಾರದ ಮೇಲೆ ರಿಜನಲ್ ಏರ್ಪೋರ್ಟ್ ಹೋಲ್ಡಿಂಗ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(ರಾಹಿ) ಕೈಗೆತ್ತಿಕೊಂಡಿದ್ದು ಒಪ್ಪಂದದ ಪ್ರಕಾರ 2012ನೇ ಡಿಸೆಂಬರ್ಗೆ ಕಾಮಗಾರಿ ಮುಗಿಸಬೇಕಿತ್ತು. ಹಲವು ವಿಘ್ನಗಳ ನಡುವೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ರಾಹಿ ಸಹ ಹಿಂದೆ ಸರಿದಿದೆ.
ಶಿವಮೊಗ್ಗ- ಭದ್ರಾವತಿ ನಡುವಿನ ಸೋಗಾನೆ ಗ್ರಾಮದಲ್ಲಿ ಈ ಮೊದಲು ವಿಮಾನ ನಿಲ್ದಾಣಕ್ಕೆಂದು ಸ್ವಾಧೀನಕ್ಕೆ ಪಡೆದ 659 ಎಕರೆಗೆ ಜತೆಯಾಗಿ ಇನ್ನಷ್ಟು ಭೂಮಿ ಬೇಕು ಎಂಬ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿಟ್ಟಾಗ ಹೆಚ್ಚುವರಿಯಾಗಿ 104 ಎಕರೆ 35 ಗುಂಟೆ ಭೂಮಿಯನ್ನು ಗುರುತಿಸಲಾಯಿತು. ಕೆಐಎಡಿಬಿ ಸಂಸ್ಥೆಗೆ ಹಸ್ತಾಂತರವನ್ನೂ ಮಾಡಲಾಯಿತು. ಇದರಲ್ಲಿ 26 ಎಕರೆ 34 ಗುಂಟೆ ಭೂಮಿ ಹೊರತುಪಡಿಸಿ ಉಳಿದೆಲ್ಲಾ ಪ್ರದೇಶ ಬಗರ್ಹುಕುಂ ಸಾಗುವಳಿ ಭೂಮಿಯಾಗಿದೆ.
ಈವರೆಗೆ ಬಗರ್ಹುಕುಂ ಸಾಗುಳಿದಾರರಿಗೆ ಭೂಮಿ ಹಸ್ತಾಂತರಿಸಲಾಗಿದೆ. ಆದರೆ, ಹಿಡುವಳಿ ಜಮೀನು ಮಾಲೀಕರಿಗೆ ಮಾತ್ರ ಕಳೆದ ನಾಲ್ಕು ವರ್ಷದಿಂದ ಪರಿಹಾರ ಸಿಕ್ಕಿಲ್ಲ.
ಏನಾಗಿದೆ?: ಹಿಡುವಳಿ ಜಮೀನಿನ 16 ರೈತರಿಗೆ ನೀಡಬೇಕಾದ ಸುಮಾರು 5 ಕೋಟಿಯಷ್ಟು ಪರಿಹಾರ ಹಣ ಇನ್ನು ಬಿಡುಗಡೆಯೇ ಆಗಿಲ್ಲ. ಅಷ್ಟರಲ್ಲಾಗಲೇ ಜಮೀನಿನ ಪಾಣಿಯಲ್ಲಿ ಕೆಐಎಡಿಬಿ ಹೆಸರು ನಮೂದಾಗಿದೆ. ಅಂದರೆ ಭೂಮಿ ಈಗ ರೈತರ ಹಕ್ಕಿನಲ್ಲಿ ಇಲ್ಲ. ಈ ಭೂಮಿಯಲ್ಲಿ ಇನ್ನೂ ರೈತರು ಸಾಗುವಳಿ ಮಾಡುತ್ತಿದ್ದು, ರೈತರು ಸರ್ಕಾರಿ ಸೌಲಭ್ಯ ಸಿಗದೆ ಒದ್ದಾಡುವಂತಾಗಿದೆ.
ಪಾಣಿಯಲ್ಲಿ ರೈತನ ಹೆಸರು ಇಲ್ಲದ ಕಾರಣ ಸೊಸೈಟಿಯಿಂದ ಸಾಲ ಸಿಗುತ್ತಿಲ್ಲ. ಕೃಷಿ ಇಲಾಖೆಯಿಂದ ಬೀಜ, ಕೀಟನಾಶಕ, ಗೊಬ್ಬರ ಖರೀದಿಸಲು ಆಗುತ್ತಿಲ್ಲ.
ನಯಾ ಪೈಸೆಯೂ ಸಿಕ್ಕಿಲ್ಲ: ಖುಷ್ಕಿ ಜಮೀನಿಗೆ ಒಂದು ಎಕರೆಗೆ 13.5 ಲಕ್ಷ, ತರಿ ಜಮೀನಿಗೆ ಒಂದು ಎಕರೆಗೆ 14.5 ಲಕ್ಷ ಪರಿಹಾರ ನೀಡಬೇಕೆಂದು 2010ರ ನವೆಂಬರ್ 30ರಂದು ನಡೆದ ಭೂದರ ಸಲಹಾ ಸಮಿತಿ ಸಭೆಯಲ್ಲಿಯೇ ತೀರ್ಮಾನವಾಗಿತ್ತು. ಆದರೆ, ಒಂದು ಪೈಸೆ ಪರಿಹಾರವೂ ಸಿಕ್ಕಿಲ್ಲ.
ಈ ನಡುವೆ ಭೂಮಿಯ ದರ ಹೆಚ್ಚಾಗಿದೆ. ಅಂದು ನಿಗದಿ ಮಾಡಿದ ದರವನ್ನು ನಮಗೆ ಈಗ ನೀಡಿದರೆ ನಷ್ಟವಾಗುತ್ತದೆ. ಆದ್ದರಿಂದ ನಮ್ಮ ಭೂಮಿಯನ್ನು ನಮಗೆ ವಾಪಸು ನೀಡಿ. ಇಲ್ಲವೇ ಎಕರೆಗೆ 25 ಲಕ್ಷ ಪರಿಹಾರ ನೀಡಿದ ಎಂದು ಹಿಡುವಳಿ ರೈತರು ಪಟ್ಟು ಹಿಡಿದಿದ್ದಾರೆ.
ರೈತ ಪಿ.ಟಿ. ಪುಟ್ಟರಾಜ್ ಅವರು ತಮ್ಮ ಗೋಳು ತೋಡಿಕೊಂಡು, ನಮ್ಮ ಭೂಮಿ ನಮಗೆ ವಾಪಸ್ ನೀಡಿ ಎಂದು ಜಿಲ್ಲಾಡಳಿತದ ಮುಂದೆ ಅಹವಾಲು ಇಟ್ಟಿದ್ದಾರೆ. ಇಲ್ಲದಿದ್ದರೆ ನಮ್ಮ ಹೆಸರಿಗೆ ವಾಪಸ್ ಖಾತೆ ಮಾಡಿಕೊಂಡಿ ಎಂದಿದ್ದಾರೆ. ಬಹುತೇಕ ರೈತರ ಅಭಿಪ್ರಾಯ ಇದೇ ಆಗಿದೆ.