ಸೊರಬ: ತಾಲೂಕಿನಲ್ಲಿ ಪುನರ್ವಸು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗೆ ಉತ್ಸಾಹ ತಂದಿದೆ. ಪ್ರಸಕ್ತ ವರ್ಷ ಮುಂಗಾರು ಉತ್ತಮ ಪ್ರವೇಶವಾಗದಿರುವುದರಿಂದ ಬಿತ್ತನೆಗೆ ಸಜ್ಜಾಗಿದ್ದ ಕೃಷಿಕರಿಗೆ ಸ್ವಲ್ಪ ಹಿನ್ನಡೆಯಾಗಿತ್ತು. ಈಗ ಬತ್ತದ ನಾಟಿಗೆ ಪೂರ್ವಭಾವಿ ತಯಾರಿಯಾಗಿ ಅಗೆಸಸಿ ತಯಾರಿ ನಡೆದಿದೆ. ಮಳೆಯ ವೈಪರೀತ್ಯದಿಂದಾಗಿ ವಾಣಿಜ್ಯ ಬೆಳೆಗಳಾದ ಶುಂಠಿ, ಅಡಕೆ ಅತಂತ್ರ ಸ್ಥಿತಿಯಲ್ಲಿದೆ. ಜೋಳದ ಬೆಳೆ ಕೂಡ ಸಂಕಷ್ಟದಲ್ಲಿದ್ದು, ಮಳೆ ರಭಸ ಹೆಚ್ಚಾದಲ್ಲಿ ನಿರೀಕ್ಷಿತ ಬೆಳೆ ತೆಗೆಯುವುದು ಕಷ್ಟದಾಯಕವಾಗಿದೆ.ಅಡಕೆ ಬೆಳೆಗೆ ತಗಲುವ ಕೊಳೆ ರೋಗ ನಿಯಂತ್ರಣಕ್ಕೆ ಈಗಾಗಲೇ ಬೆಳೆಗಾರರು ಮುಂದಾಗಿದ್ದರೂ, ಮಳೆ ಹೆಚ್ಚಾದಲ್ಲಿ ಹಿಂದಿನ ಸಾಲಿನಲ್ಲಾದ ಬೆಳೆನಾಶ ಈ ವರ್ಷವೂ ಆಗಬಹುದು ಎಂಬ ಆತಂಕ ಬೆಳೆಗಾರರದ್ದಾಗಿದೆ.