ಟಿ ವೈ. ಸೋಮಶೇಖರ್
ಮಧುಗಿರಿ: ತಾಲೂಕಿನ ಜನತೆಗೆ ಶುದ್ಧ ಕುಡಿವ ನೀರಿಲ್ಲ. ದುಡಿವ ಕೈಗಳಿಗೆ ಕೆಲಸವಿಲ್ಲ. ಹಳ್ಳಿಗಳಿಗೆ ಕಾಲಿಟ್ಟರೆ ಕೇವಲ ಮುದುಕರೇ ಎದುರಾಗುತ್ತಾರೆ. ಯುವಕ-ಯುವತಿಯರು ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗಿದ್ದಾರೆ.
ತಾಲೂಕಿನಲ್ಲಿ ಈಗ್ಗೆ 6-7 ವರ್ಷ ಸಕಾಲಕ್ಕೆ ಮಳೆ, ಬೆಳೆ ಇಲ್ಲದೆ ರೈತರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇಂತಹ ಬಂಜರು ಭೂಮಿಯಲ್ಲಿ ಇಲ್ಲೊಬ್ಬ ಪದವೀಧರ ಕೃಷಿಕ ಶ್ರೀನಿವಾಸ್ ಭೂಮಿ ತಾಯಿ ನಂಬಿ ಕೆಟ್ಟವರಿಲ್ಲ ಎಂಬುದನ್ನು ಕೃಷಿ ಮಾಡುವ ಮೂಲಕ ಕಲ್ಲಂಗಡಿ, ನುಗ್ಗೆ ಮತ್ತಿತರ ಆರ್ಥಿಕ ಬೆಳೆ ಬೆಳೆದು ಮಾಡಿ ತೋರಿಸಿದ್ದಾರೆ.
ತಾಲೂಕು ಆಂಧ್ರ ಗಡಿ ಭಾಗಕ್ಕೆ ಹೊಂದಿ ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ಮಳೆಯಾಶ್ರಿತ ಬೆಳೆ ಬೆಳೆದು ಜೀವನ ನಡೆಸಬೇಕು. ಸತತ ಬರಗಾಲ ಬೆನ್ನು ಹತ್ತಿ ರೈತ ಸಮುದಾಯವನ್ನು ಕಂಗೆಡಿಸಿದೆ. ವಿದ್ಯೆ ಕಲಿತ ಪದವೀಧರ ನಿರುದ್ಯೋಗಿಗಳು ನಗರ ಪ್ರದೇಶಗಳಿಗೆ ವಲಸೆ ಹೋಗಿ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರಿ ದುಡಿದು ತಮ್ಮ ಜೀವನ ನಡೆಸುವ ಜೊತೆಗೆ ತಂದೆ- ತಾಯಿ ಸಾಕಬೇಕಿದೆ. ಈಗಿರುವಾಗ ಮಧುಗಿರಿ ಕಸಬಾ ಬಿಜವರ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಬಿಎ ಪದವೀಧರ ಬಿ.ಎನ್. ಶ್ರೀನಿವಾಸ್ ಅಣ್ಣ ಬಿ.ಎನ್. ಲಕ್ಷ್ಮೀಪತಿ ಅವರು ಪ್ರಾರಂಭಿಸಿದ್ದ ಇಟ್ಟಿಗೆ ಫ್ಯಾಕ್ಟರಿ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದರು. ಆದರೆ, ಪದವೀಧರನಾಗಿ ಸುಮ್ಮನೆ ಇಷ್ಟಕ್ಕೆ ಕೂರಬಾರದು ಎಂಬುದನ್ನರಿತ ಶ್ರೀನಿವಾಸ್ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಕೃಷಿ ಚಟುವಟಿಕೆ ಮಾಡಬೇಕು ಎಂಬ ಹುಚ್ಚು ಹೆಚ್ಚಾಯಿತು. 'ನಾ ಸಾಯ ನೀ ಸಾಯ ಮನೆ ಮಂದಿಯೆಲ್ಲ ಸಾಯ' ಎಂಬ ಗಾದೆ ಮಾತಿನಂತೆ ಕೃಷಿಗೆ ಬಹುತೇಕ ರೈತರಿಗೆ ಬೇಸಾಯದ ಬಗ್ಗೆ ಆಸಕ್ತಿ ಇಲ್ಲ. ಆದರೆ, ಶ್ರೀನಿವಾಸ್ ಭೂಮಿ ನಂಬಿ ಕೆಟ್ಟವರಿಲ್ಲ ಎಂದು ಭಾವಿಸಿ 8 ಎಕರೆ ಬರಡು ಭೂಮಿ ಖರೀದಿಸಿ ಕೃಷಿ ಮಾಡುವ ಸಾಹಸಕ್ಕೆ ಧುಮುಕಿದರು. ಖರೀದಿ ಮಾಡಿದ ಬರಡು ಭೂಮಿಗೆ ಫಲವತ್ತಾದ ಕೆರೆ ಮಣ್ಣು ಸರಬರಾಜು ಮಾಡಿ 3 ಬೋರ್ವೆಲ್ ಕೊರೆಸಿದ್ದಾರೆ. ಈ ಪೈಕಿ ಎರಡು ಬೋರ್ವೆಲ್ಗಳು ಫೇಲ್ ಆದವು. ದೃತಿಗೆಡದ ಶ್ರೀನಿವಾಸ್ಗೆ ಮತ್ತೊಂದರಲ್ಲಿ ಒಂದೂವರೆ ಇಂಚು ನೀರು ಸಿಕ್ಕಿತು.
ಈ ಅಲ್ಪ ಪ್ರಮಾಣದ ಜಲವನ್ನೇ ನಂಬಿ ಪ್ರಾರಂಭದಲ್ಲಿ ನೀರಿಗೆ ತೊಂದರೆ ಆಗದಿರಲಿ ಎಂದು ಭಾವಿಸಿ ತೋಟಗಾರಿಕೆ ಬೆಳೆಗೆ ಆದ್ಯತೆ ನೀಡಿದರು. ಈ 8 ಎಕರೆ ಪ್ರದೇಶದಲ್ಲಿ ನಿಂಬೆ, ಶ್ರೀಗಂಧ, ಬದುಗಳಲ್ಲಿ ಜಂಬು ನೇರಳೆ, ಆರ್ಥಿಕ ಬೆಳೆಗಳಾದ ತೆಂಗು, ದಾಳಿಂಬೆ ಸಸಿ ನಾಟಿ ಮಾಡಿ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡು ಅಲ್ಪ ಪ್ರಮಾಣದ ನೀರು ಸಮರ್ಥವಾಗಿ ಬಳಸಿದ್ದಾರೆ. ಈ ಎಲ್ಲ ಸಸಿಗಳ ನಡುವೆ ಕಳೆದ ನವೆಂಬರ್ನಲ್ಲಿ ಕಲ್ಲಂಗಡಿ ಸಸಿ ನೆಟ್ಟರು. ಅದು ಈಗ ಕಟಾವಿಗೆ ಸಿದ್ಧವಾಗಿದ್ದು, ಫಲವತ್ತಾಗಿ ಬೆಳೆದಿರುವ ಕಲ್ಲಂಗಡಿ ಹಣ್ಣೊಂದು 10-15 ಕೆಜಿ ತೂಗುತ್ತವೆ. ಇದರಿಂದ ಸುಮಾರು 25 ಟನ್ ಇಳುವರಿ ಬರುವ ನಿರೀಕ್ಷೆಯಲ್ಲಿ ಶ್ರೀನಿವಾಸ್ ಇದ್ದಾರೆ.
'ಮನಸ್ಸಿದ್ದರೆ ಮಾರ್ಗ' ಎಂಬಂತೆ ಈ ಮಧ್ಯೆ ಜಮೀನಿನ ಒಳಭಾಗದಲ್ಲಿ 500 ನುಗ್ಗೆ ಮರ ಬೆಳೆದಿದ್ದು, ಅದು ಕೂಡ ಉತ್ತಮವಾಗಿ ಬೆಳೆದು ನಿಂತಿದೆ. ಈ ಕೃಷಿ ಚಟುವಟಿಕೆಗೆ ನಾನು ಖರ್ಚು ಮಾಡಿದ್ದು 38 ಲಕ್ಷ. ಈಗ ಖರ್ಚು ಕಳೆದು ಈ ಎಲ್ಲ ಬೆಳೆಗಳಿಂದ ವಾರ್ಷಿಕ 3 ಲಕ್ಷ ರುಪಾಯಿ ಲಾಭ ಪಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1 ವರ್ಷದ ಹಿಂದೆ ಬರಡಾಗಿದ್ದ ನೆಲ ಇಂದು ಹಸಿರಿನಿಂದ ಕಂಗೊಳಿಸಲು ನನ್ನ ಅಣ್ಣ ಲಕ್ಷ್ಮೀಪತಿ ಅವರ ಸಹಕಾರ ಅತಿ ಮುಖ್ಯ ಎಂದು ಅಣ್ಣನ ಉಪಕಾರ ಶ್ರೀನಿವಾಸ್ ಸ್ಮರಿಸುತ್ತಾರೆ. ಈಗಲೂ ಗುದ್ದಲಿ, ಸಲಿಕೆ ಹಿಡಿದು ಕೆಲಸ ಮಾಡಲು ಹಿಂಜರಿಯುವುದಿಲ್ಲ ಎನ್ನುತ್ತಾರೆ ಶ್ರೀನಿವಾಸ್.