ತುಮಕೂರು: ಜವಾಹರ್ ನವೋದಯ ವಿದ್ಯಾಲಯದ ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ 4 ನೇ ದಿನಕ್ಕೆ ಕಾಲಿಟ್ಟಿದೆ.
ದೇಶಾದ್ಯಂತ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ತುಮಕೂರಿನ ವಿದ್ಯಾಲಯದ ಸಿಬ್ಬಂದಿ ಕೂಡ ಪಾಲ್ಗೊಂಡಿದ್ದಾರೆ.
20 ಅಂಶಗಳ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿರುವ ಸಿಬ್ಬಂದಿ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವಂತಿಲ್ಲ ಎಂದು ಘೋಷಿಸಿದ್ದಾರೆ.
ಸಿಸಿಎಸ್ ಪಿಂಚಣಿ ಯೋಜನೆ ಜಾರಿಗೊಳಿಸುವುದು, ಪ್ರತಿಶತ 10 ವಿಶೇಷ ಭತ್ಯೆಯನ್ನು ಶಿಕ್ಷಕೇತರ ಸಿಬ್ಬಂದಿಗೂ ವಿಸ್ತರಿಸುವುದು, ಜೆಸಿಎಂ ಸಂರಚನೆ ಮಾಡುವುದು, ಎಂಎಸಿಪಿ ಸೌಲಭ್ಯವನ್ನು ಶಿಕ್ಷಕರಿಗೂ ಒದಗಿಸುವುದು, ಸದನ ಶಿಕ್ಷಕ ಮತ್ತು ಸಹ ಸದನ ಶಿಕ್ಷಕರ ಭತ್ಯೆಯನ್ನು ಹೆಚ್ಚಿಗೆ ಮಾಡುವುದು, ಸದನ ಶಿಕ್ಷಕಿಯರ ಸಂಖ್ಯೆಯನ್ನು ಹೆಚ್ಚಿಸುವುದು, ಎಲ್ಲ ಸಿಬ್ಬಂದಿ ವರ್ಗದ ಕೆಲಸದ ವೇಳೆಯನ್ನು ನಿರ್ಧರಿಸುವುದು, ವಾರ್ಡನ್ ಮತ್ತು ಪರಿಚಾರಿಕೆಯರ ಹುದ್ದೆಗಳನ್ನು ಮಂಜೂರು ಮಾಡುವುದು, ಸಂರಚಿತ ರಜೆಯ ಪದ್ಧತಿಯನ್ನು ಪುನಃ ಊರ್ಜಿತಗೊಳಿಸುವುದು, ಸ್ನಾತಕೋತ್ತರ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವುದು, ಹಾಗೂ ಪ್ರಾದೇಶಿಕ ಭಾಷಾ ಶಿಕ್ಷಕರಿಗೆ ಪದೋನ್ನತಿ ಕಲ್ಪಿಸುವುದು, ಪಾರದರ್ಶಕ ವರ್ಗಾವಣಾ ನೀತಿಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.