ಕ.ಪ್ರ. ವಾರ್ತೆ ್ಣ ಕುಣಿಗಲ್ ್ಣ ಮಾ.29
ಪದವಿ ವ್ಯಾಸಂಗದ ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿ, ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ಪ್ರಚಲಿತ ವಿದ್ಯಮಾನ, ವೈಜ್ಞಾನಿಕ, ಸಾಮಾಜಿಕ, ಶೈಕ್ಷಣಿಕ ವಿಷಯ ಸೇರಿದಂತೆ ಜ್ವಲಂತ ವಿಷಯಗಳನ್ನು ಸಂಗ್ರಹಿಸಿ, ಅವುಗಳನ್ನು ಪುಸ್ತಕಕ್ಕೆ ಸೀಮಿತಗೊಳಿಸದೆ ಮಸ್ತಕದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಯಶಸ್ಸು ಸಾಧ್ಯ ಎಂದು ತಾಲೂಕು ಮೂಲದ, ಮದ್ದೂರು ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚೆಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಿತ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಇರುವ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಅಧ್ಯಯನಶೀಲರಾಗುವುದರ ಜೊತೆಯಲ್ಲಿ ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ ವಿದ್ಯಾರ್ಥಿ ದಿಸೆಯಿಂದಲೂ ವೃತ್ತಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಜೊತೆಯಲ್ಲಿ ಪತ್ರಿಕೆಗಳಲ್ಲಿ ಬರುವಂತ ಶೈಕ್ಷಣಿಕ, ವಿವಿಧ ವೈಜ್ಞಾನಿಕ ವಿಷಯಗಳನ್ನು ಸಂಗ್ರಹಿಸಿ,
ಅವುಗಳ ಅಧ್ಯಯನ ಮಾಡಬೇಕೆಂದರಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಾನಸಿಕವಾಗಿ, ಬೌದ್ಧಿಕವಾಗಿ, ನುರಿತ ಉಪನ್ಯಾಸಕರ, ಹಿರಿಯರ ಮಾರ್ಗದರ್ಶನದಲ್ಲಿ ಸಿದ್ದತೆ ನಡೆಸಿ ಪರೀಕ್ಷೆ ಎದುರಿಸಿದಾಗ ಖಂಡಿತವಾಗಿ ಯಶಸ್ಸು ದೊರಕುತ್ತದೆ ಎಂದರು.
ಪ್ರಾಚಾರ್ಯ ವಿಶ್ವನಾಥ್, ಉಪನ್ಯಾಸಕರಾದ ನರಸಿಂಹನ್, ಡಿ.ಕೃಷ್ಣ, ರಮೇಶ್ ಸೇರಿದಂತೆ ಇತರೆ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು. ಶಿಬಿರದಲ್ಲಿ ವಾಣಿಜ್ಯ ವಿಭಾಗದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.