ಕ.ಪ್ರ.ವಾರ್ತೆ ತುರುವೇಕೆರೆ ಮಾ.29
ಸ್ವಾಮಿ ನಮ್ಮೂರ್ನಾಗೆ ಅಕ್ರಮವಾಗಿ ಎಣ್ಣೆ(ಮದ್ಯ) ಮಾರೋ ಅಂಗಡಿಗಳು, ಶಾಲೆ ಹತ್ರನೇ ಗುಟ್ಕಾ, ಬೀಡಿ, ಸಿಗರೇಟು ಮಾರಾಟ ಮಾಡ್ತಾ ಇರೋ ಅಂಗಡಿಗಳನ್ನು ತೆಗೆಸುದ್ರೆ ಮಾತ್ರ ನಾವು ಚುನಾವಣೇಲಿ ಓಟ್ ಮಾಡ್ತೀವಿ. ಇಲ್ಲಾಂದ್ರೆ ನಾವ್ಯಾರೂ ಮತ ಹಾಕಲ್ಲ. ಎಲ್ಲಾ ನಿಮ್ ಕೈಲೇ ಐತೆ. ಏನ್ ಮಾಡ್ತೀರೋ ಮಾಡಿ... ಹೀಗೆ ತಾಲೂಕು ದಂಡಾಧಿಕಾರಿ ಹಾಗೂ ತಾಪಂ ಅಧಿಕಾರಿಗಳ ಮುಂದೆ ಮನವಿ ಪತ್ರ ಹೊತ್ತು ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಆಗ್ರಹಪಡಿಸಿದರು. ಹೀಗೆ ಮನವಿ ಪತ್ರ ಹೊತ್ತು ತಂದವರು ತಾಲೂಕಿನ ಹುಲಿಕಲ್ ಗ್ರಾಮದ ಮಹಿಳೆಯರು. ತಮ್ಮ ಗ್ರಾಮದ ದೇವಾಲಯದ ಮುಂಭಾಗ ಇರೋ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಾರೆ. ಈ ಬಗ್ಗೆ ಎಷ್ಟು ಬಾರಿ ಅಬಕಾರಿ ಇಲಾಖೆಯವರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯವೂ ತಮ್ಮ ಗಂಡ, ಮಕ್ಕಳು ಕುಡಿದು ಬಂದು ಗಲಾಟೆ ಮಾಡ್ತಾರೆ. ಇದರಿಂದಾಗಿ ಆರ್ಥಿಕ ಸಂಕಷ್ಠವನ್ನೂ ಎದುರಿಸಬೇಕಾಗಿದೆ. ಮೊದಲೇ ಬರಗಾಲ.. ಹೀಗಿದ್ದರೂ ಕೆಲಸಕ್ಕೂ ಹೋಗದ ಗಂಡಸರು ಕುಡಿಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾದರೆ ಸಂಸಾರ ಮಾಡೋದಾದ್ರೂ ಹೇಗೆ, ಹೀಗೆ ಮುಂದುವರೆದರೆ ಕುಟುಂಬ, ಕುಟುಂಬಗಳೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದು ಗ್ರಾಮದ ಶಿವಮ್ಮ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.