ತುಮಕೂರು: ಬೆಂಗಳೂರಿನ ಭವಿಷ್ಯದ ಉಪನಗರಿ, ಕಲ್ಪತರು ಜಿಲ್ಲೆ ಎಂಬ ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಯಾವ ಪಕ್ಷ ಕೋಟೆ ಕಟ್ಟುತ್ತೆ ಎನ್ನುವ ಪ್ರಶ್ನೆ ಎದ್ದಿದೆ.
ಮೊದಲೆಲ್ಲಾ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ನಂತರ ಈ ಜಿಲ್ಲೆಯ ಮೇಲೆ ಜೆಡಿಎಸ್ ಪಕ್ಷ ಸ್ಪಷ್ಟ ಹಿಡಿತ ಸಾಧಿಸಿತು. ಒಮ್ಮೆಯಂತೂ 11 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 9 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿತ್ತು. ಕಳೆದ ಬಾರಿ 11 ಕ್ಷೇತ್ರಗಳಲ್ಲಿ ಜೆಡಿಎಸ್ 4, ಕಾಂಗ್ರೆಸ್ 3, ಬಿಜೆಪಿ 3 ಹಾಗೂ ಒಬ್ಬ ಪಕ್ಷೇತರರು ಜಯಗಳಿಸಿದ್ದರು. ಈ ಬಾರಿ ಯಾರ ಮುಡಿಗೆ ಹೆಚ್ಚು ಕ್ಷೇತ್ರಗಳು ಬರುತ್ತೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಯಿಂದ ಸತತವಾಗಿ ಬಿಜೆಪಿಯ ಸೊಗಡು ಶಿವಣ್ಣ ಆಯ್ಕೆಯಾಗುತ್ತಲೇ ಬಂದಿದ್ದಾರೆ. ನಾಲ್ಕು ಅವಧಿಯಲ್ಲೂ ಅವರ ಎದುರಾಳಿ ಕಾಂಗ್ರೆಸ್ ಆಗಿತ್ತು ಎಂಬುದು ವಿಶೇಷ. ಆದರೆ ಈ ಬಾರಿ ಕೆಜೆಪಿ ಪಕ್ಷ ಉದಯವಾಗಿದೆ. ಆ ಪಕ್ಷದಿಂದ ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರ ಪುತ್ರ ಜ್ಯೋತಿ ಗಣೇಶ್ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್‌ನಿಂದ ರಫೀಕ್ ಅಹಮದ್‌ಗೆ ಬಹುತೇಕ ಟಿಕೆಟ್ ಸಿಗಲಿದ್ದು ಜೆಡಿಎಸ್‌ಗೆ ಯಾರು ಎಂಬುದು ಇನ್ನು ಅಂತಿಮವಾಗಿಲ್ಲ. ಹೀಗಾಗಿ ತುಮಕೂರು ನಗರದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಾಟಾಗಲಿದೆ. ಕಳೆದ ಐದು ಅವಧಿಯಿಂದ ಇಲ್ಲಿ ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಗೆದ್ದಿಲ್ಲ. ಹಾಗಾಗಿ ಈ ಬಾರಿ ತುಮಕೂರು ಕ್ಷೇತ್ರವನ್ನು ತನ್ನ ಮಡಿಲಿಗೆ ತೆಗೆದುಕೊಳ್ಳಲು ಈ ಎರಡೂ ಪಕ್ಷಗಳು ತಯಾರಿ ನಡೆಸುತ್ತಿದೆ. ಇನ್ನು ಹೊಸದಾಗಿ ಉದ್ಭವವಾಗಿರುವ ಕೆಜೆಪಿ ಕೂಡ ನಗರಸಭೆ ಚುನಾವಣೆಯಲ್ಲಿ ಗಣನೀಯ ಸಾಧನೆ ಮಾಡಿದ್ದು ಈ ಬಾರಿ ಗೆದ್ದೇ ತೀರುತ್ತೇವೆಂಬ ಉತ್ಸಾಹದಲ್ಲಿದೆ.
ಸುರೇಶ್‌ಗೌಡ ಅಭ್ಯರ್ಥಿ: ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಈ ಬಾರಿಯೂ ಬಿಜೆಪಿಯಿಂದ ಹಾಲಿ ಶಾಸಕ ಬಿ. ಸುರೇಶ್‌ಗೌಡರೇ ಅಭ್ಯರ್ಥಿ, ಕಳೆದ ಬಾರಿ ಜೆಡಿಎಸ್‌ನಿಂದ ನಿಂತು ಪರಾಭವಗೊಂಡಿದ್ದ ನಿಂಗಪ್ಪ ಈ ಬಾರಿ ಕೆಜೆಪಿ ಅಭ್ಯರ್ಥಿ. ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿಗೆ ಹೋಗಿದ್ದ ಗೌರಿಶಂಕರ್ ಜೆಡಿಎಸ್ ಅಭ್ಯರ್ಥಿ. ಇನ್ನು ಕಾಂಗ್ರೆಸ್‌ನಿಂದ ಯಾವ ಅಭ್ಯರ್ಥಿಯೂ ಅಂತಿಮವಾಗಿಲ್ಲ.
ಈ ಬಾರಿ ಇಲ್ಲೂ ಕೂಡ ಚತುಷ್ಕೋನ ಸ್ಪರ್ಧೆ ಏರ್ಪಾಟಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಆ ಕ್ಷೇತ್ರ ಬಿಜೆಪಿಗೆ ವಾಲಿತ್ತು. ಈ ಬಾರಿ ಯಾರು ಆ ಕ್ಷೇತ್ರವನ್ನು ಕಸಿಯುತ್ತಾರೆ ಎಂಬ ಪ್ರಶ್ನೆ ಎದ್ದಿದೆ.
ಇನ್ನು ಕೊರಟಗೆರೆ ಮೀಸಲು ಕ್ಷೇತ್ರಕ್ಕೆ ಬಂದರೆ ಈ ಬಾರಿ ಅಖಾಡ ಸಿದ್ಧವಾಗಿದೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷರೇ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್‌ನಿಂದ ಸುಧಾಕರ್‌ಲಾಲ್ ಕಣಕ್ಕೆ ಇಳಿದಿದ್ದಾರೆ. ಕೆಜೆಪಿಯಿಂದ ವಾಲೆಚಂದ್ರು ಸ್ಪರ್ಧಿಸಿದ್ದಾರೆ. ಇನ್ನು ಬಿಜೆಪಿಯಿಂದ ಯಾವ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಇಲ್ಲೂ ಕೂಡ ತ್ರಿಕೋನ ಸ್ಪರ್ಧೆ ಏರ್ಪಾಟಾಗಲಿದೆ.
ಪಾವಗಡ ಶ್ರೀರಾಮ್ ಕೆಜೆಪಿ ಅಭ್ಯರ್ಥಿ: ಪಾವಗಡ ಮೀಸಲು ಕ್ಷೇತ್ರ ಕೂಡ ಈ ಬಾರಿ ಪ್ರತಿಷ್ಠೆಯ ಕಣವಾಗಿದೆ. ಈ ಬಾರಿ ಅಲ್ಲಿ ಕಾಂಗ್ರೆಸ್‌ನಿಂದ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್ ಸ್ಪರ್ಧಿಸುತ್ತಿದ್ದಾರೆ.
ಜೆಡಿಎಸ್‌ನಿಂದ ತಿಮ್ಮರಾಯಪ್ಪ ಸ್ಪರ್ಧಿಸಿದರೆ ಕೆಜೆಪಿಯಿಂದ ಪಾವಗಡ ಶ್ರೀರಾಮ್ ಕಣಕ್ಕೆ ಧುಮುಕಿದ್ದಾರೆ. ಬಿಜೆಪಿ ಇನ್ನು ಅಭ್ಯರ್ಥಿಯನ್ನು ಘೋಷಿಸಿಲ್ಲ. ಇದು ಕೂಡ ಪ್ರತಿಷ್ಠೆಯ ಕಣವಾಗುವುದರಲ್ಲಿ ಅನುಮಾನವಿಲ್ಲ. ಉಳಿದಂತೆ ಶಿರಾದಿಂದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಜೆಡಿಎಸ್‌ನಿಂದ ಮಾಜಿ ಸಚಿವ ಬಿ. ಸತ್ಯನಾರಾಯಣ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ಇದು ಕೂಡ ಪ್ರತಿಷ್ಠೆಯ ಕಣವಾಗಿದೆ.
ಕುಣಿಗಲ್‌ನಲ್ಲಿ ಇನ್ನು ಜೆಡಿಎಸ್‌ನಲ್ಲಿ ಸಣ್ಣ ಗೊಂದಲ ಇದೆ. ಇನ್ನೊಂದು ದಿನದಲ್ಲಿ ಅದು ಕೂಡ ಬಗೆಹರಿಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತುರುವೇಕೆರೆಯಲ್ಲಿ ಜೆಡಿಎಸ್‌ನಿಂದ ಎಂ.ಟಿ. ಕೃಷ್ಣಪ್ಪ ಸ್ಪರ್ಧಿಸುವುದು ಬಹುತೇಕ ಖಚಿತ.
ಕಾಂಗ್ರೆಸ್‌ನಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡುವ ಸುದ್ದಿ ಎದ್ದಿದೆ. ಕೆಜೆಪಿಯಿಂದ ಮಸಾಲೆ ಜಯರಾಂಗೆ ಟಿಕೆಟ್ ಸಿಕ್ಕಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಈವರೆಗೂ ಘೋಷಿಸಿಲ್ಲ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಈ ಬಾರಿ ಜೆಡಿಎಸ್‌ನ ಕ್ಷೇತ್ರ ಉಳಿಸಿಕೊಳ್ಳುತ್ತೋ ಅಥವಾ ಬೇರೆಯವರು ಕಸಿದುಕೊಳ್ಳುತ್ತಾರೋ ನೋಡಬೇಕು.
ಚತುಷ್ಕೋನ ಸ್ಪರ್ಧೆ: ಗಣಿ ನಾಡೆಂದು ಖ್ಯಾತಿ ಗಳಿಸಿರುವ ಚಿಕ್ಕನಾಯಕನಹಳ್ಳಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಬಾರಿ ಕಾಂಗ್ರೆಸ್‌ನಿಂದ ಸತೀಶ್ ಎಂಬುವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಕೆಜೆಪಿಯಿಂದ ಮಾಧುಸ್ವಾಮಿ ಸ್ಪರ್ಧಿಸಿದರೆ, ಬಿಜೆಪಿಯಿಂದ ಕಿರಣ್‌ಕುಮಾರ್ ಅಖಾಡಕ್ಕೆ ಇಳಿಯಲಿದ್ದಾರೆ. ಜೆಡಿಎಸ್‌ನಿಂದ ಹಾಲಿ ಶಾಸಕ ಸುರೇಶ್‌ಬಾಬು ಅವರೇ ಅಭ್ಯರ್ಥಿ. ಇಲ್ಲೂ ಕೂಡ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವುದು ಖಚಿತ.
ಇನ್ನು ಕಲ್ಪತರು ನಾಡೆಂದೇ ಖ್ಯಾತಿ ಗಳಿಸಿರುವ ತಿಪಟೂರಿನಲ್ಲೂ ಕೂಡ ಚತುಷ್ಕೋನ ಸ್ಪರ್ಧೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಶಾಸಕ ಬಿ.ಸಿ. ನಾಗೇಶ್ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಲಿಂಗರಾಜು ಹೆಸರು ಚಾಲ್ತಿಯಲ್ಲಿದೆ. ಕೆಜೆಪಿಯಿಂದ ಲೋಕೇಶ್ವರ್ ಸ್ಪರ್ಧಿಸಿದರೆ ಕಾಂಗ್ರೆಸ್‌ನಿಂದ ಕೆ. ಷಡಕ್ಷರಿ ನಿಲ್ಲುವುದು ಬಹುತೇಕ ಖಚಿತ.
ಕಳೆದ ಸಲ ಅನಿತಾ ಕುಮಾರಸ್ವಾಮಿಯಿಂದ ಮಧುಗಿರಿ ಕ್ಷೇತ್ರ ಸುದ್ದಿ ಮಾಡಿತ್ತು. ಆದರೆ ಈ ಬಾರಿ ಅಲ್ಲಿ ಅವರು ಸ್ಪರ್ಧಿಸುತ್ತಿಲ್ಲ. ಅವರ ಬದಲಿಗೆ ಜೆಡಿಎಸ್ ವೀರಭದ್ರಯ್ಯ ಅವರಿಗೆ ಟಿಕೆಟ್ ನೀಡಲಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಕಣದಲ್ಲಿದ್ದಾರೆ. ಬಿಜೆಪಿ ಇನ್ನು ಅಭ್ಯರ್ಥಿಯನ್ನು ಘೋಷಿಸಿಲ್ಲ. ಕೆ.ಎನ್. ರಾಜಣ್ಣ ಅವರು ಎರಡು ಬಾರಿ ಸೋತಿರುವುದರಿಂದ ಅವರ ಪರವಾಗಿ ಅನುಕಂಪ ಎದ್ದಿದೆ.
ಇನ್ನು ಗುಬ್ಬಿ ಕ್ಷೇತ್ರದಿಂದ ಜೆಡಿಎಸ್‌ನಿಂದ ಹಾಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಸ್ಪರ್ಧಿಸುತ್ತಿದ್ದಾರೆ. ಬೇರೆ ಯಾವ ಪಕ್ಷಗಳು ಇನ್ನು ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಎಸ್.ಆರ್. ಶ್ರೀನಿವಾಸ್ ಅವರು ಸತತವಾಗಿ ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಯಾರಿಗೆ ವಿಜಯಮಾಲೆ ಅನ್ನೋದು ಸದ್ಯಕ್ಕಿರುವ ಪ್ರಶ್ನೆ. ಒಟ್ಟಾರೆಯಾಗಿ 11 ವಿಧಾನಸಭಾ ಕ್ಷೇತ್ರದ ಮೇಲೆ ಯಾವ ಪಕ್ಷ ಪಾರುಪತ್ಯ ಮೆರೆಯುತ್ತೆ ಎಂಬುದನ್ನು ಕಾದು ನೋಡಬೇಕು.