ತುಮಕೂರು

ರಾಜಕೀಯ ದಿಗ್ಗಜರ ತವರೂರು

ಮದ್ದೂರು: ಮದ್ದೂರು ಕ್ಷೇತ್ರವು ಆತಗೂರು, ಕಸಬಾ, ಕೊಪ್ಪ ಹಾಗೂ ಚಿಕ್ಕಅರಸಿನಕೆರೆ ಹೋಬಳಿಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಸಂಸದರಾದ ಜಿ.ಮಾದೇಗೌಡ ಹಾಗೂ ಡಾ.ಅಂಬರೀಷ್ ಅವರಿಂದಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದ ಕ್ಷೇತ್ರವೂ ಹೌದು.
ಪ್ರಭಾವಿ ರಾಜಕಾರಣಿಗಳನ್ನು ಬಳುವಳಿಯಾಗಿ ನೀಡಿದ ಮದ್ದೂರು ಕ್ಷೇತ್ರ ವಿಚಿತ್ರ ಹಾಗೂ ವಿಶೇಷವೆಂದರೆ ಎಚ್.ಕೆ.ವೀರಣ್ಣಗೌಡ ಹಾಗೂ ಎಸ್.ಎಂ.ಕೃಷ್ಣ ಅವರಂತಹ ಮೇಧಾವಿ ರಾಜಕಾರಣಿಗಳಿಗೂ ಸೋಲಿನ ರುಚಿ ತೋರಿಸಿದೆ. 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕೆಎಂಪಿ ಪಕ್ಷದಿಂದ ಎಸ್.ಸಿ.ಮಲ್ಲಯ್ಯ ಸ್ಪರ್ಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಕೆ.ವೀರಣ್ಣಗೌಡ ಎದುರಾಳಿಯಾದರು. ಆಗಷ್ಟೆ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಅಧಿಕಾರ ಮುಗಿಸಿದ್ದ ಮಲ್ಲಯ್ಯ ಅವರ ಮೇಲಿನ ಕಾಂಗ್ರೆಸ್ ವಿರೋಧಿ ಎಂಬ ಕಳಂಕ ಚುನಾವಣೆಯಲ್ಲಿ ಸೋಲಿಗೆ ಕಾರಣವಾಯಿತು.
ಮೂಲತಃ ಚನ್ನಪಟ್ಟಣ ತಾಲೂಕು ಅವ್ವೇರಹಳ್ಳಿ ಗ್ರಾಮದವರಾದರೂ ಎಚ್.ಕೆ.ವೀರಣ್ಣಗೌಡ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದವರು.1957ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಪಿಎಸ್‌ಪಿ ಅಭ್ಯರ್ಥಿಯಾಗಿದ್ದ ಮಲ್ಲಯ್ಯರ ಸಹೋದರ ಸಂಬಂಧಿ ಎಸ್.ಕೆ.ಚಿಕ್ಕಣ್ಣ ಅವರನ್ನು ಸೋಲಿಸಿದರು.
2ನೇ ಬಾರಿ ಶಾಸಕರಾದ ವೀರಣ್ಣಗೌಡರು, ಕೆಂಗಲ್ ಹನುಮಂತಯ್ಯ ಅವರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಗಿರಿ ದಕ್ಕಿತು. ಪ್ರದೇಶ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಮೇಲೆ ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತರಾದರು. ಆದರೆ, 1962ರ ಚುನಾವಣೆ ಗೌಡರ ರಾಜಕೀಯ ದಿಕ್ಕನ್ನೇ ಬದಲಾಯಿಸಿತು.
ಈ ಚುನಾವಣೆಯಲ್ಲಿ ವೀರಣ್ಣಗೌಡರು ಕಾಂಗ್ರೆಸ್‌ನಿಂದ 3ನೇ ಬಾರಿ ರಣರಂಗ ಪ್ರವೇಶಿಸಿದರು. ಆಗಿನ್ನೂ ಯುವ ನಾಯಕರಾಗಿದ್ದರು ಪ್ರಬುದ್ಧತೆ ಮೈಗೂಡಿಸಿಕೊಂಡಿದ್ದ ಎಸ್.ಎಂ.ಕೃಷ್ಣ, ಪಿಎಸ್‌ಪಿ ಹುರಿಯಾಳಾದರು. ಚುನಾವಣೆಯಲ್ಲಿ ಕೃಷ್ಣ ಕೇವಲ 1956 ಮತಗಳ ಅಂತರದಿಂದ ಭವಿಷ್ಯ ಮುಖ್ಯಮಂತ್ರಿ ಎಂದು ಬಿಂಬಿತರಾಗಿದ್ದ ವೀರಣ್ಣಗೌಡರನ್ನು ಪರಾಭವಗೊಳಿಸಿದರು.
1967ರಲ್ಲಿ ಎಸ್.ಎಂ.ಕೃಷ್ಣ ಮತ್ತೆ ಪಿಎಸ್‌ಪಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾದಾಗ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ವೀರಣ್ಣಗೌಡ ಅವರ ಅಳಿಯ ಎಂ.ಮಂಚೇಗೌಡ ಗೆಲವು ಸಾಧಿಸಿದರು. ಅತ್ತ ವೀರಣ್ಣಗೌಡರು ಕಿರುಗಾವಲು ಕ್ಷೇತ್ರದಲ್ಲಿ ಜಿ.ಮಾದೇಗೌಡರ ವಿರುದ್ಧ ಸೋಲು ಅನುಭವಿಸುತ್ತಾರೆ.
ಇದಾದ ತರುವಾಯ ಕೃಷ್ಣ ಕಾಂಗ್ರೆಸ್ ಸೇರಿ ದೆಹಲಿ ರಾಜಕಾರಣದತ್ತ ಮುಖ ಮಾಡಿದರು. ಮಾತ್ರವಲ್ಲ, 1972ರ ಚುನಾವಣೆಯಲ್ಲಿ ತಮ್ಮ ಒಡನಾಡಿ ಎ.ಡಿ.ಬಿಳೀಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿಯೂ ಯಶಸ್ವಿಯಾದರು. ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಚೇಗೌಡರು ಸ್ವತಂತ್ರವಾಗಿ ಸ್ಪರ್ಧಿಸಿ ಸೋಲುತ್ತಾರೆ.
1978ರ ವೇಳೆಗೆ ಕಾಂಗ್ರೆಸ್ ವಿಭಜನೆಗೊಂಡಾಗ ಇಂದಿರಾ ಕಾಂಗ್ರೆಸ್‌ನಿಂದ ಬಿಳೀಗೌಡ ಹಾಗೂ ಸಂಸ್ಥಾ ಕಾಂಗ್ರೆಸ್‌ನಿಂದ ಚಿಕ್ಕಣ್ಣ ಸ್ಪರ್ಧಿಸುತ್ತಾರೆ. ವಿಭಜಿತ ಕಾಂಗ್ರೆಸ್ ಮತಗಳ ಲಾಭ ಪಡೆದ ಜನತಾ ಪಕ್ಷದ ಮಂಚೇಗೌಡರು ಭರ್ಜರಿ ಗೆಲವು ಸಾಧಿಸುತ್ತಾರೆ.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮತ್ತೆ ಕೈ ತೆಕ್ಕೆಗೆ ಬಂದು,1983ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಂಚೇಗೌಡರು, ಜನತಾ ಪಕ್ಷದ ಅಪ್ಪಾಜಿಗೌಡ ಮತ್ತು ಬಿಜೆಪಿಯ ಬಿ.ಟಿ.ಶ್ರೀನಿವಾಸಗೌಡ ವಿರುದ್ಧ ಸುಲಭವಾಗಿ ಗೆಲ್ಲುತ್ತಾರೆ. 1984ರಲ್ಲಿ ಗೌಡರು ನಿಧನರಾದ ಮೇಲೆ ಉಪಚುನಾವಣೆಯಲ್ಲಿ ಜಯವಾಣಿ ಮಂಚೇಗೌಡರು ದಿಗ್ವಿಜಯ ಸಾಧಿಸಿದರು.
1985ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಜಯವಾಣಿ ಮಂಚೇಗೌಡ ಸ್ಪರ್ಧಿಸಿದರೆ, ಜನತಾ ಪಕ್ಷದಿಂದ ಬೆಸಗರಹಳ್ಳಿಯ ಅಪ್ಪಾಜಿಗೌಡ ಎದುರಾಳಿಯಾದರು. ಇಬ್ಬರ ನಡುವಿನ ತೀವ್ರ ಪೈಪೋಟಿಯಲ್ಲಿ ಅಪ್ಪಾಜಿಗೌಡ 37,381 ಮತಗಳನ್ನು ಪಡೆದು ಜಯಗಳಿಸಿದ್ದರು.  ಆನಂತರ ರಾಜ್ಯ ರಾಜಕಾರಣಕ್ಕೆ ಮರಳಿದ ಎಸ್.ಎಂ.ಕೃಷ್ಣ, 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಜನತಾ ಪಕ್ಷದಿಂದ ಎಂ.ಎಸ್.ಸಿದ್ದರಾಜು ಮತ್ತು ರೈತಸಂಘ ನಾಯಕ ಎಚ್.ಶ್ರೀನಿವಾಸ್ ಪಕ್ಷೇತರರಾಗಿ ರಣರಂಗ ಪ್ರವೇಶಿಸುತ್ತಾರೆ.
ಕಾಂಗ್ರೆಸ್ ಪರವಾದ ಅಲೆ ಮತ್ತು ವೈಯಕ್ತಿಕ ವರ್ಚಿಸ್ಸಿನಿಂದ ಕೃಷ್ಣ ಚುನಾವಣೆಯಲ್ಲಿ ಗೆದ್ದು ಉಪ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಹುದ್ದೆಯನ್ನು ನಿಭಾಯಿಸುತ್ತಾರೆ. 1994ರಲ್ಲಿ ಕೃಷ್ಣ, ಅಘೋಷಿತ ಮುಖ್ಯಮಂತ್ರಿಯಾಗಿ ಬಿಂಬಿತರಾದಾಗ ದಿ.ಮಂಚೇಗೌಡರ ಪುತ್ರ ಮಹೇಶ್ ಚಂದ್ ಪರಾಭವಗೊಳಿಸಿ ರಾಜಕೀಯ ಇತಿಹಾಸ ಸೃಷ್ಟಿಸಿದರು.
1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ, ಪಾಂಚಜನ್ಯ ಮೊಳಗಿಸಿದರು. ತವರು ಕ್ಷೇತ್ರದ ನಾಯಕನಿಗೆ ಮುಖ್ಯಮಂತ್ರಿ ಹುದ್ದೆ ಕೈತಪ್ಪಬಾರದು ಎಂಬ ಉದ್ದೇಶದಿಂದ ಜನತಾ ಪಕ್ಷದಲ್ಲಿದ್ದ ಎಂ.ಎಸ್.ಸಿದ್ದರಾಜು ಕಾಂಗ್ರೆಸ್‌ಗೆ ಜಿಗಿದು ಕೃಷ್ಣ ಅವರ ಗೆಲವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಇಲ್ಲಿ ಜನತಾದಳದ ಅಭ್ಯರ್ಥಿಯಾಗಿದ್ದ ಮಹೇಶ್‌ಚಂದ್ ಸೋಲುತ್ತಾರೆ.
ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕಿರುಗಾವಲು ಕ್ಷೇತ್ರ ಕೈಬಿಟ್ಟು ಹೋದಾಗ 2004ರಲ್ಲಿ ಕೃಷ್ಣ ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿ, ಡಿ.ಸಿ.ತಮ್ಮಣ್ಣ ಅವರಿಗೆ ಮದ್ದೂರು ಕ್ಷೇತ್ರ ಬಿಟ್ಟುಕೊಡುತ್ತಾರೆ.  ದೇವೇಗೌಡರ ಡಬಲ್ ಬಿ ಫಾರಂ ಗೇಮ್, ಬೀಗರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ತಮ್ಮಣ್ಣರ ಗೆಲವಿಗೆ ಕಾರಣವಾಗುತ್ತದೆ. 2008ರಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಎಂ.ಎಸ್.ಸಿದ್ದರಾಜು ಅವರನ್ನು ಬೆಂಬಲಿಸುವ ಮೂಲಕ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರಿಗೆ ಸೋಲಿನ ರುಚಿ ತೋರಿಸುತ್ತಾರೆ. ಸಿದ್ದರಾಜು ಅಕಾಲಿಕ ಸಾವಿಗೀಡಾದಾಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಜಿಗಿದು ಅಭ್ಯರ್ಥಿಯಾದ ತಮ್ಮಣ್ಣ, ಜೆಡಿಎಸ್ ಅಭ್ಯರ್ಥಿ ಕಲ್ಪನಾ ವಿರುದ್ಧ ಸೋಲು ಅನುಭವಿಸುತ್ತಾರೆ.
ಈಗ ಜೆಡಿಎಸ್‌ಗೆ ವಲಸೆ ಬಂದಿರುವ ಪಕ್ಷಾಂತರಿ ಡಿ.ಸಿ.ತಮ್ಮಣ್ಣ ಅವರಿಗೆ ದೇವೇಗೌಡರು ರಾಜಕೀಯ ನೆಲೆ ಕಲ್ಪಿಸಲು ಮುಂದಾಗಿದ್ದಾರೆ. ಇನ್ನು ಹಾಲಿ ಶಾಸಕಿ ಕಲ್ಪನಾ ಕಾಂಗ್ರೆಸ್ ಕೈ ಹಿಡಿದು ಮಾಜಿ ಮುಖ್ಯಮಂತ್ರಿ ಕೃಷ್ಣ ಮತ್ತು ಮಾಜಿ ಸಂಸದ ಜಿ.ಮಾದೇಗೌಡರ ಆಶೀರ್ವಾದದಿಂದ ರಾಜಕೀಯ ವಿರೋಧಿಗಳಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆಕಾಂಕ್ಷಿತ ಅಭ್ಯರ್ಥಿಗಳು: ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಜಿಪಂ ಮಾಜಿ ಅಧ್ಯಕ್ಷ ಗುರುಚರಣ್ ಮತ್ತು ಮಾಜಿ ಶಾಸಕ ಮಧು ಜಿ.ಮಾದೇಗೌಡ ಪೈಪೋಟಿ ನಡೆಸಿದ್ದಾರೆ. ಒಂದು ವೇಳೆ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ  ಕಣಕ್ಕಿಳಿದರೆ ಅವರಿಬ್ಬರೂ ಹಿಂದಕ್ಕೆ ಸರಿಯಲಿದ್ದಾರೆ. ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಿಎಸ್ಸಾರ್ ಕಾಂಗ್ರೆಸ್‌ನಿಂದ ಎಂ.ಐ.ಪ್ರವೀಣ್ ಸ್ಪರ್ಧಿಸುತ್ತಿದ್ದಾರೆ. ಶಾಸಕಿ ಕಲ್ಪನಾ ಸಿದ್ದರಾಜು ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!