ಶಿರಾ: ಶಾಶ್ವತ ನೀರಾವರಿ ಯೋಜನೆ ರೂಪಿಸಿ, ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಕಂಡಾಗ ಮಾತ್ರ ರೈತನ ಬದುಕು ಹಸನಾಗಲು ಸಾಧ್ಯವೆಂದು ಚಿತ್ರದುರ್ಗ ಸಂಸದ ಜನಾರ್ದನ ಸ್ವಾಮಿ ಹೇಳಿದರು.
ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ 13 ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಸಿ ಮಾತನಾಡಿದರು. ಭದ್ರಾ ನದಿಯಿಂದ ಶಿರಾ ತಾಲೂಕಿನ 41 ಕೆರೆಗಳಿಗೆ ನೀರು ಹರಿಸುವ ಜೊತೆಗೆ ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಮಾಡಬೇಕೆಂಬ ಮಹಾತ್ವಕಾಂಕ್ಷೆಯಿಂದ 6 ಸಾವಿರ ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, 1 ಸಾವಿರ ಕೋಟಿ ಖರ್ಚು ಮಾಡಲಾಗಿದೆ, ಅಜ್ಜಂಪುರ ಹತ್ತಿರ 1 ಕಿಮೀ ಸುರಂಗ ಮಾರ್ಗದ ಕಾಲುವೆ ಮಾಡಬೇಕಾಗಿರುವುದರಿಂದ ಕಾಮಗಾರಿ ವಿಳಂಬವಾಗಿದ್ದು ರೈತರ ಅಸಹಕಾರ ಕೂಡ ಅಡ್ಡಿಯಾಗಿದೆ, ರಾಜಕೀಯ ಪ್ರೇರಣೆಯಿಂದ ಭೂಮಿ ನೀಡಲು ಅಡ್ಡಿಪಡಿಸಿರುವ ರೈತರಿಗೆ ಅತಿಶೀಘ್ರವೆ ಪರಿಹಾರ ದೊರೆಕಿಸಿ ತಕ್ಷಣ ಸುರಂಗ ತೊಡುವ ಕೆಲಸ ಪ್ರಾರಂಭಿಸಿ ಭದ್ರ ಯೋಜನೆಯಿಂದ ನೀರನ್ನು ಶಿರಾಭಾಗಕ್ಕೆ ಹರಿಸುವ ಮುಖೇನ ಶಾಶ್ವತ ನೀರಾವರಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಜನೋಪಕಾರಿ: ಸಾನ್ನಿದ್ಯ ವಹಿಸಿ ಮಾತನಾಡಿದ ಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ, ಜನರ ನಾಡಿ ಮಿಡಿತ ಅರಿತು ಅವರಿಗೆ ನೀಡಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಿದಾಗ ಸರ್ಕಾರದ ಯೋಜನೆಗಳು
ಜನೋಪಕಾರಿಯಾಗಲಿವೆ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂಬ ಸದುದ್ದೇಶ ಈ ಜಾತ್ರಾ ಮಹೋತ್ಸವದಲ್ಲಿ ಅಡಗಿದೆ ಎಂದರು.
ಸೇವೆ ಮುಂದುವರಿಯಲಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು ಮಾತನಾಡಿ ಈ ಭಾಗದ ಜನರ, ಕೃಷಿಕರ ಸೇವೆ ಮಾಡುವಲ್ಲಿ ಶ್ರೀಮಠ ಉತ್ತಮ ಸಾಧನೆ ಸಾಧಿಸಿದ್ದು, ಶ್ರೀಗಳ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ತಿಳಿಸಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ರೈತರ ಜ್ಞಾನ ಹೆಚ್ಚಿಸುವಲ್ಲಿ ಶ್ರಮಿಸಿದೆ ಎಂದರು.
ಬಹುಮಾನ ವಿತರಣೆ: ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಉತ್ತಮ ಮಳಿಗೆ ಪ್ರಶಸ್ತಿಯನ್ನು ಕೃಷಿ ಇಲಾಖೆಗೆ ನೀಡಲಾಯಿತು. ಆರೋಗ್ಯವಂತ ಮಕ್ಕಳ ಸ್ಪರ್ಧೆ ನಡೆಸಿ ರಿಷಿಕ, ಮನೋಜ್, ಚಿಂಟು ಅವರಿಗೆ ಬಹುಮಾನ ನೀಡಲಾಯಿತು. ಕ್ರೀಡಾಪಟುಗಳಾದ ಸೇಂಟ್ ಆನ್ ಪ್ರೌಢಶಾಲೆಗೆ ಬಹುಮಾನ ನೀಡಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಎಚ್.ಅನುಷಾ, ಸುಮಲತಾ, ಭಾಗ್ಯಮ್ಮ, ಲತಾ, ಪಲ್ಲವಿ, ಹೇಮಲತಾ ಇವರಿಗೆ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕರಾದ ಡಾ.ಎಚ್.ನಾಗರಾಜು ಅವರು ವಿಶೇಷ ಭಾಷಣ ಮಾಡಿದರು. ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕೆ.ಎಂ.ಎಫ್. ನಿರ್ದೇಶಕರಾದ ಟಿ. ಪ್ರಕಾಶ್, ತಾ.ಪಂ. ಉಪಾಧ್ಯಕ್ಷ ಉದಯಶಂಕರ್, ಸ್ಪಟಿಕಪುರಿ ಪ್ರತಿಷ್ಠಾನದ ಶ್ರೀನಿವಾಸ್, ತಾ.ಪಂ. ಸದಸ್ಯ ರಾಘವೇಂದ್ರ, ಶಾಂತಮ್ಮ ಅಶ್ವತ್ಥಪ್ಪ, ಕೆ.ಎಂ.ಪದ್ಮರಾಜು, ಪ್ರೊ. ಕೆ.ಚಂದ್ರಣ್ಣ, ಯಶೋಧರ, ಜಿ.ಎನ್. ಮೂರ್ತಿ, ಸೇರಿದಂತೆ ಹಲವರು ಹಾಜರಿದ್ದರು.
ಶಿಕ್ಷಕ ಪುಟ್ಟೀರಪ್ಪ ಸ್ವಾಗತಿಸಿ, ಪ್ರೊ. ಕೆ.ಚಂದ್ರಣ್ಣ ನಿರೂಪಿಸಿ, ವಂದಿಸಿದರು.