ತುಮಕೂರು: ಶಾಲಾಮಕ್ಕಳು ಅನುದಿನವೂ ಕಲಿಕೆಯ ಪಥದಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಸಿದ್ಧಗಂಗಾ ಮಠದ ಕಿರಿಯಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಮಾಜದ ಏಳಿಗೆ ಹಾಗೂ ಸ್ವಾಸ್ಥವನ್ನು ಕಾಪಾಡಲು ಪ್ರತಿಯೊಬ್ಬ ವಿದ್ಯಾರ್ಥಿಯು ತೊಡಗಬೇಕು. ವಿದ್ಯೆಯು ನಿಜವಾದ ಸಂಪತ್ತು. ವಿದ್ಯೆಗಿಂತ ಮಿಗಿಲು ಈ ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕಿರುತೆರೆ ಕಲಾವಿದ ಹನುಮಂತೇಗೌಡ ಶ್ರೀಮಠದ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುತ್ತಾ ಸಂಸ್ಥೆಯು ಸಮಾಜಕ್ಕೆ ದೊಡ್ಡ ಆಸ್ತಿ ಎಂದು ಬಣ್ಣಿಸಿದರು.
ಶ್ರೀಗಳು 107ನೇ ವಯಸ್ಸಿನಲ್ಲಿ ಮಾಡುತ್ತಿರುವ ಕಾಯಕವು ವಿಶ್ವಮಾನ್ಯವಾದುದಾಗಿದೆಯೆಂದು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಭಾಗಿಯಾದ ಎಂ.ಎಸ್. ನಾಗೇಂದ್ರರವರು ಪ್ರತಿಯೊಬ್ಬ ವಿದ್ಯಾರ್ಥಿಯು ಇಷ್ಟಪಟ್ಟು ಅಭ್ಯಾಸ ಮಾಡಿ ತಂದೆ-ತಾಯಿ ಹಾಗೂ ಗುರುಗಳಿಗೆ ಕೀರ್ತಿಯನ್ನು ತರಬೇಕೆಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಡಿ.ಡಿ.ಪಿ.ಐ ಈಶ್ವರಯ್ಯ, ಮಕ್ಕಳ ಸಾಧನೆ ಹಾಗೂ ಶಿಕ್ಷಕರ ಕರ್ತವ್ಯವನ್ನು ಮನಸಾರೆ ಹೊಗಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕುಮುದಮ್ಮನವರು ಪ್ರತಿಭಾ ಪುರಸ್ಕಾರ ನೀಡಿ ಶಾಲೆಯ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಬಗ್ಗೆ ಪ್ರಶಂಸಿದರು.
ಸಂಗೀತ ಪ್ರಾರ್ಥಿಸಿದರು. ಜಿ.ಎಚ್. ಕೆಂಪರಾಜು ಸ್ವಾಗತಿಸಿದರು. ಉಪಪ್ರಾಚಾರ್ಯ ಎಸ್. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಹುಚ್ಚಯ್ಯ ವಂದಿಸಿದರು. ದೊಡ್ಡಬಸಪ್ಪ ನಿರೂಪಿಸಿದರು.