ತುಮಕೂರು

'ಒಂದಾಗಿ ಹೋರಾಡದಿದ್ದರೆ ನೀರು ಸಿಗಲ್ಲ'

ಕುಣಿಗಲ್: ತಾಲೂಕಿನ ಎಲ್ಲ ರೈತರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಡದೇ ಹೋದರೆ ಈ ಬಾರಿಯೂ ತಾಲೂಕಿಗೆ ಹೇಮಾವತಿ ನೀರು ಹರಿಯುವುದಿಲ್ಲ ಎಂದು ರೈತ ಸಂಘ ಹಾಗೂ ಹಸಿರು ಸೇನೆ (ಚಂದ್ರಶೇಖರ್ ಬಣ) ತಾಲೂಕಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ಹೇಳಿದರು.
ನಗರ ಶಾಖೆ ರೈತ ಸಂಘಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿಯಲು ಕಾರಣರಾದ ಕುಣಿಗಲ್ ತಾಲೂಕಿನ ಜನತೆಗೆ ಇಂದು ಹೇಮಾವತಿ ನೀರು ಹರಿಯದಿರುವುದು ಖೇದಕರ. ತಾಲೂಕಿನ ರೈತರು ಮತ್ತು ಸಾರ್ವಜನಿಕರ ಇಚ್ಛಾಶಕ್ತಿ ಕೊರತೆ. ನಮ್ಮ ಜನತೆ ಜಡತ್ವ ಮತ್ತು ಅಸಡ್ಡೆಯಿಂದ ನಮ್ಮ ಪಾಲಿನ ನೀರನ್ನು ಪಡೆಯಲಾಗುತ್ತಿಲ್ಲ. ಇನ್ನು ಮುಂದೆ ಸಂಘಟಿತರಾಗಿ ಹೋರಾಡುವ ಮೂಲಕ ನೀರನ್ನು ಪಡೆಯಲೇಬೇಕು. ಇಂದಲ್ಲದಿದ್ದರೆ ಮುಂದೆಂದೂ ಹೇಮಾವತಿ ನೀರು ಕುಣಿಗಲ್ ತಾಲೂಕಿಗೆ ದೊರೆಯದು. ಅಧಿಕಾರಿಗಳು ಯಾವುದೇ ಲಾಬಿಗೆ ಮಣಿಯದೆ ಹೇಮಾವತಿ ನಾಲೆಯ ಕೊನೆಯ ಕೆರೆಯಾದ ಕುಣಿಗಲ್ ದೊಡ್ಡಕೆರೆಗೆ ಮೊದಲು ನೀರನ್ನು ಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ತಾಲ್ಲೂಕಿನ ಜನತೆ ಒಂದಾಗಿ ರೈತ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕುಣಿಗಲ್ ನಗರ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎಂ.ರಾಜಣ್ಣ, ತಿಮ್ಮಯ್ಯ, ಪ್ರಸಾದ್, ರೇಣುಕಪ್ಪ, ಗಿರೀಶ್, ದಿನೇಶ್ ಕುಮಾರ್, ಮೂಡ್ಲಗಿರಿಯಪ್ಪ, ಕೃಷ್ಣಪ್ಪ, ಶಿವಣ್ಣ, ಪಾರ್ಥಸಾರಥಿ, ವೇಣು, ರಾಜಣ್ಣ, ರಾಮು, ವೆಂಕಟೇಶ್ ಮುಂತಾದವರಿದ್ದರು.  
ಉತ್ತಮ ಆರೋಗ್ಯವಂತ'ರಾಗಿ': ಮೂಕಪ್ಪ
ಹುಳಿಯಾರು: ಆಹಾರ ಧಾನ್ಯಗಳಲ್ಲಿ ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ರಾಗಿ ಬಳಕೆಯಿಂದ ಯಾವುದೇ ಕಾಯಿಲೆಗಳು ನಮ್ಮತ್ತ ಸುಳಿಯುವುದಿಲ್ಲ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಬ್ಯಾಡಗಿಯ ಮೂಕಪ್ಪ ಪೂಜಾರ ತಿಳಿಸಿದರು.
ಹೋಬಳಿಯ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ರಾಗಿ ಬೇಸಾಯದ ನಾಟಿಪದ್ಧತಿ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಇಂದಿನ ಆಧುನಿಕ ಯುಗ ಸಿರಿಧಾನ್ಯಗಳ ಬಳಕೆ ಕಡಿಮೆಯಾಗುವಂತೆ ಮಾಡಿದೆ. ಇವುಗಳ ಪೈಕಿ ರಾಗಿ ಹೆಚ್ಚು ಮಹತ್ವವನ್ನು ಪಡೆದಿದೆ. ರಾಗಿಯಿಂದ ಅನೇಕ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು ಅದರ ಬಳಕೆ ಆಗುತ್ತಿಲ್ಲ ಎಂದು ವಿಷಾದಿಸಿದರು.  ತಾಪಂ ಉಪಾಧ್ಯಕ್ಷ ಆರ್.ಪಿ.ವಸಂತಯ್ಯ ಮಾತನಾಡಿ, ಸರ್ಕಾರ ನೀಡುವ 1ಗೆ ಕೆಜಿ ಅಕ್ಕಿಯನ್ನು ನಂಬಿಕೊಂಡು ಕೃಷಿ ಚಟುವಟಿಕೆಗಳನ್ನೇ ಮರೆಯುತ್ತಿದ್ದೇವೆ ಎಂದರು.ಯೋಜನೆ ತಾಲೂಕು ನಿರ್ದೇಶಕ ರೋಹಿತಾಕ್ಷ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮದಾಸಪ್ಪ ಅಧ್ಯಕ್ಷತೆ ವಹಿಸಿದ್ದರು. ದಶರಥ,  ಕವಿತಾ, ವದ್ದೀಗಪ್ಪ, ಜಯಲಿಂಗರಾಜು ಇದ್ದರು.
ನೂರುಲ್ಲಾ, ಯಗಚಿಹಳ್ಳಿಯ ಪ್ರಗತಿಪರ ರೈತ ಎಲ್.ವಿಜಯಕುಮಾರ್ ರಾಗಿ ನಾಟಿ ಪದ್ಧತಿಯ ವಿವಿಧ ಹಂತಗಳು ಹಾಗೂ ವಿಶೇಷತೆಗಳ ಬಗ್ಗೆ ವಿವರ ನೀಡಿದರು. ಯೋಜನೆಯ ಗಾಣದಾಳು ವಲಯ ಮೇಲ್ವಿಚಾರಕ ಕೆ.ಎಸ್.ಸುರೇಶ್ ಸ್ವಾಗತಿಸಿ, ತಾಲೂಕು ಕೃಷಿ ಮೇಲ್ವಿಚಾರಕ ಎಸ್.ಎಚ್.ನಾಗಪ್ಪ ನಿರೂಪಿಸಿ, ವಂದಿಸಿದರು.
ಸ್ಥಿರಾಸ್ತಿ ಮಾರುಕಟ್ಟೆ ಮಾರ್ಗಸೂಚಿ ಪರಿಷ್ಕರಣೆ
ಶಿರಾ: ತಾಲೂಕು ವ್ಯಾಪ್ತಿಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆ ನಿರ್ಧರಣಾ ಉಪಸಮಿತಿ ಪ್ರಸ್ತುತ ಸಾಲಿಗೆ ಪರಿಷ್ಕರಿಸಿದೆ. ಸಾರ್ವಜನಿಕರ ಮಾಹಿತಿಗಾಗಿ ಈ ಪಟ್ಟಿಯನ್ನು ತಾಲೂಕು ಕಚೇರಿ, ನಗರಸಭೆ, ಭೂಮಾಪನಾ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಬೆಲೆ ಕುರಿತಂತೆ ಸಾರ್ಳಜನಿಕರು ಸಲಹೆ-ಸೂಚನೆ, ಆಕ್ಷೇಪಣೆಗಳನ್ನು ಪ್ರಕಟಿತ ದಿನಾಂಕದಿಂದ 15 ದಿನಗಳ ಒಳಗೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ಮತ್ತು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸುವಂತೆ ಉಪನೊಂದಣಾಧಿಕಾರಿ ರಂಗರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಕಲಚೇತನರಿಗೆ ವೈದ್ಯ ತಪಾಸಣೆ
ಗುಬ್ಬಿ: ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಸರ್ವಶಿಕ್ಷಣ ಅಭಿಯಾನ ವತಿಯಿಂದ ಜು. 25ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ 6 ರಿಂದ 15ವಯೋವಾನದ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲು ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. 2013-14 ನೇ ಸಾಲಿನಲ್ಲಿ ಭಾಗವಹಿಸಿದ ಮಕ್ಕಳನ್ನು ಹೊರತುಪಡಿಸಿ ಉಳಿದ ಅರ್ಹ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಪಾಹಾರ ಹಾಗೂ ಬಸ್ ಪ್ರಯಾಣ ಭತ್ಯೆ ನೀಡಲಾಗುತ್ತದೆ.
ಲಾರಿ ಮಾಲೀಕರ ಪ್ರತಿಭಟನೆ ಇಂದು
ತುಮಕೂರು: ಓವರ್ ಲೋಡ್ ನಿಯಂತ್ರಣದ ಬಗ್ಗೆ ಆರ್‌ಟಿಒ ಈವರೆಗೆ ಕ್ರಮ ಜಾರಿಗೊಳಿಸಲು ವಿಫಲವಾಗಿರುವುದನ್ನು ಖಂಡಿಸಿ ಜಿಲ್ಲಾ ಲಾರಿ ಮಾಲೀಕರ ಸಂಘ ಜು.23ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಆರ್‌ಟಿಒ ಕಚೇರಿ ಮುಂದೆ ಧರಣಿ ನಡೆಸಲಿದೆ. ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ನ್ ಅಸೋಸಿಯೇಷನ್ ಅಧ್ಯಕ್ಷ ಬಿ. ಚೆನ್ನಾರೆಡ್ಡಿ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ
ತುಮಕೂರು: ತುಮಕೂರಿನ ಸಿದ್ಧಲಿಂಗೇಶ್ವರ ಪ್ರೌಢಶಾಲೆಯಲ್ಲಿ 56 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬೆಂಗಳೂರಿನ ಫಿನೇಷಿಯಾ ಆಸ್ಪತ್ರೆಯ ಡಾ.ಸಿ. ಜಯಣ್ಣ ಅವರು 75 ಸಾವಿರ ಬಹುಮಾನ ನೀಡಿದರು. ಎಲ್ಲಾ ವಿದ್ಯಾರ್ಥಿಗಳಿಗೆ ದಾಸೋಹ ಸಿರಿ ಎನ್ನುವ 250 ಮೌಲ್ಯದ ಗ್ರಂಥ ನೀಡಿ ಸನ್ಮಾನಿಸಲಾಯಿತು. ಸಾನಿಧ್ಯವನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಡಿಡಿಪಿಐ ಈಶ್ವರಯ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂ.ಬಿ. ಕುಮಾರ್, ಪಿ. ಮೂರ್ತಿ, ಎನ್.ಬಿ. ಪ್ರದೀಪ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿ.ಎಸ್. ಸಿದ್ಧಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಡಿ.ಎಸ್. ನಾಗರಾಜು ಸ್ವಾಗತಿಸಿದರು. ಶಿವಕುಮಾರ್ ವಂದಿಸಿದರು. ಎಂ. ಮಹದೇವಯ್ಯ ನಿರೂಪಿಸಿದರು.
ಬೀಳ್ಕೊಡುಗೆ
ಕೊರಟಗೆರೆ: ಕೊರಟಗೆರೆಯ ಬೆಸ್ಕಾಂ ಕಚೇರಿಯ ಸಹಾಯಕ ಅಭಿಯಂತರಾಗಿ ಕೆಲಸ ನಿರ್ವಹಿಸುತಿದ್ದ ನಾಗರಾಜು ರವರು ಬೇರೆಡೆ ವರ್ಗಾವಣೆಗೊಂಡಿದ್ದು ಅವರಿಗೆ ಕೊರಟಗೆರೆಯ ಗುತ್ತಿಗೆದಾರರ ಸಂಘದಿಂದ ಬೀಳ್ಕೊಡುಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕೊರಟಗೆರೆ ಬೆಸ್ಕಾಂಗೆ ಸಹಾಯಕ ಅಭಿಯಂತರರಾಗಿ ಮಾಯಕೃಷ್ಣಾನಾಯಕ್ ಅಧಿಕಾರ ಸ್ವೀಕರಿಸಿದರು. ಕೊರಟಗೆರೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಹ್ಲಾದ್ ಆಚಾರ್, ಖಜಾಂಚಿ ಪ್ರದೀಪ್‌ಕುಮಾರ್, ಪದಾಧಿಕಾರಿಗಳಾದ ಜಿ.ಆರ್. ರವಿಂದ್ರ, ಮುತ್ತುರಾಜ್, ಗೊವಿಂದ್, ನಾರಾಯಣಪ್ಪ, ಜಗದೀಶ್ ಮತ್ತು ಮಹೇಶ್ ಇನ್ನಿತರರು ಹಾಜರಿದ್ದರು.
ನೆಪ ಮಾತ್ರಕ್ಕೆ ಕ್ರೀಡಾಕೂಟ
ಕುಣಿಗಲ್: ಪಟ್ಟಣದಲ್ಲಿ ಮಂಗಳವಾರ ನಡೆದ ಕಸಬಾ ಹೋಬಳಿ ಕ್ರೀಡಾಕೂಟವನ್ನು ಸಂಬಂಧಪಟ್ಟ ಅಧಿಕಾರಿಗಳು ಕೇವಲ ನೆಪ ಮಾತ್ರಕ್ಕೆ ಆಯೋಜಿಸಿದ್ದು, ಕ್ರೀಡಾಕೂಟ ಆಯೋಜನೆಯ ಮೂಲ ಉದ್ದೇಶ ಮರೆತಿರುವುದಕ್ಕೆ ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ತರಾತುರಿಯಲ್ಲಿ ಆಯೋಜನೆಗೊಳಿಸಲಾಗಿದೆ. ಕ್ರೀಡಾಕೂಟಕ್ಕೆ ಕೆಲವು ಶಾಲೆಗಳ ವಿದ್ಯಾರ್ಥಿಗಳು ಸತತ ಅಭ್ಯಾಸ ನಡೆಸಿ ಹಾಜರಾದರೂ ಸಂಬಂಧಪಟ್ಟನಿರ್ವಾಹಕರ ನಿರ್ಲಕ್ಷ್ಯದಿಂದ ಕ್ಷುಲಕ ನೆಪವೊಡ್ಡಿ ಕ್ರೀಡೆಗಳಿಗೆ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡದೆ ಹಲವು ಕ್ರೀಟಾಪಟುಗಳಿಗೆ ಅನ್ಯಾಯವಾಗಿದೆ. ಕೆಲವು ಶಾಲೆಯವರು ಲೋಪದೋಷಗಳನ್ನು ಮುಚ್ಚಿಟ್ಟು ಆ ಶಾಲೆಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ತಾರತಮ್ಯ ತೋರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸಮರ್ಪಕ ಕ್ರೀಡಾಕೂಟಗಳ ಆಯೋಜನೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ