ತುರುವೇಕೆರೆ: ಅಲ್ಲಿ ಮೂವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಇವರೊಟ್ಟಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಈಗ ಇಹಲೋಕ ತ್ಯಜಿಸಿರುವ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರು, ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳ ಸಮಾಗಮವಾಗಿತ್ತು. ಅವರೆಲ್ಲರೂ ತಮ್ಮ ತಮ್ಮ ಅನುಭವ, ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಿದ್ದರು. ಹಿರಿಯರು ತಾವು ಸ್ವಾತಂತ್ರ್ಯ ಹೋರಾಟಕ್ಕೆ ಸನ್ನದ್ಧರಾಗಿದ್ದ ಸಂಗತಿಗಳ ಮೆಲುಕು ಹಾಕಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಮ್ಮ ಪತಿಯ ಸೇವೆಯ ಬಗ್ಗೆ ಪತ್ನಿಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಮಕ್ಕಳು ಹಾಗೂ ಮೊಮ್ಮಕ್ಕಳೂ ಕುಟುಂಬ ಸದಸ್ಯರ ದೇಶಭಕ್ತಿಗೆ ಕಿವಿಯಾಗಿದ್ದರು!
ಹೌದು. ಇಂಥದೊಂದು ಅಪರೂಪದ ಕಾರ್ಯಕ್ರಮವನ್ನು ತುರುವೇಕೆರೆ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬ ವರ್ಗದವರಿಗಾಗಿ ಶುಕ್ರವಾರ ತಾಲೂಕಿನ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯಾಧ್ಯಕ್ಷ ಚೌದ್ರಿ ಟಿ ರಂಗಪ್ಪ ಅವರ ಮನೆಯಲ್ಲಿ ಆಯೋಜಿಸಲಾಹಿತ್ತು. ಚೌದ್ರಿ ಟಿ ರಂಗಪ್ಪನವರು ತಾಲೂಕಿನಲ್ಲಿರುವ ಹಿರಿಯ ಸ್ವಾಂತಂತ್ರ್ಯ ಹೋರಾಟಗಾರರು ಹಾಗೂ ನಿಧನ ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ವರ್ಗದವರನ್ನು ಗೌರವಿಸಲೆಂದೇ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಜತೆಗೆ ಸರ್ವ ಸದಸ್ಯರ ಸಭೆಯನ್ನೂ ಆಯೋಜಿಸಲಾಗಿತ್ತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಗೌರವ ಅಧ್ಯಕ್ಷರಾಗಿರುವ ಮಾಯಸಂದ್ರದ ಎಂ.ಎಚ್.ನರಸಿಂಹಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಕ್ಷಣಗಳನ್ನು ಮೆಲುಕು ಹಾಕಿದರು. ಇಂದು ದೇಶ ಭಕ್ತಿ ಕಡಿಮೆಯಾಗುತ್ತಿದೆ. ಎಲ್ಲೆಲ್ಲೂ ಸ್ವಾರ್ಥ ತುಂಬಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಿತಿಯೇ ಇಲ್ಲದ ದುರಾಸೆಯ ಫಲವಾಗಿ ಇಂದು ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ವಿಷಾದಿಸಿದರು. ಮದ್ಯಪಾನ ಮುಕ್ತ ದೇಶ ಮಾಡುವ ಕನಸು ಕಂಡಿದ್ದ ಗಾಂಧಿಯವರ ಕನಸು ಇಂದು ಚೂರು ಚೂರಾಗಿದೆ ಎಂದು ನರಸಿಂಹಯ್ಯ ಕಳವಳ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹಿರಿಯ ಹೋರಾಟಗಾರರಾಗಿರುವ ಪುಟ್ಟಯ್ಯ, ಸಂಘದ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸಾಚಾರ್, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಜಿಪಂ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಟಿ.ಎಸ್.ದಾನಿಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಚೆಂಡೂರು ರಾಮೇಗೌಡ, ಬಾಣಸಂದ್ರ ಸತ್ಯನಾರಾಯಣ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯಾಧ್ಯಕ್ಷ ಚೌದ್ರಿ ಟಿ ರಂಗಪ್ಪನವರು ಸಮಾರಂಭಕ್ಕೆ ಆಗಮಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಎಂ.ಎನ್.ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.