ಉಡುಪಿ

ಯಕ್ಷಗಾನದಲ್ಲಿ ವಿಚಾರ ವಿಮರ್ಶೆ, ಚರ್ಚೆಗೆ ಹೆಚ್ಚಿನ ಅವಕಾಶ: ಪೇಜಾವರ ಸ್ವಾಮೀಜಿ

Lingaraj Badiger

ಉಡುಪಿ:  ಪುರಾಣ ಪ್ರವಚನ ಜನರಿಗೆ ಪೌರಾಣಿಕ ವಿಚಾರಗಳನ್ನು ತಿಳಿಸಿದರೆ, ಯಕ್ಷಗಾನದಲ್ಲಿ ವಿಚಾರ ವಿಮರ್ಶೆ, ಚರ್ಚೆಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಸಂವಾದ ಮತ್ತು ಪೌರಾಣಿಕ ವಿಚಾರಗಳ ಬಗ್ಗೆಯೂ ಇಲ್ಲಿ ಚರ್ಚಿಸಲು ಸಾಧ್ಯವಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಅವರು ಭಾನುವಾರ ಶ್ರೀ ಕಷ್ಣ ಮಠದಲ್ಲಿ ಪರ್ಯಾಯ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯಾವಧಿಯಲ್ಲಿ ತಿಂಗಳ ಪ್ರತೀ ಎರಡನೇ ಭಾನುವಾರ ನಡೆಸುತ್ತಿದ್ದ ತಿಂಗಳ ತಾಳಮದ್ದಲೆ ಸರಣಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಹಾಭಾರತ ಕಥಾನಕದ ಒಟ್ಟು 24 ತಾಳಮದ್ದಲೆ ಕಾರ್ಯಕ್ರಮಗಳ ಸಿಡಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ತಾಳ ಮದ್ದಲೆ ಮತ್ತು ಬಯಲಾಟ ಎಂಬುದು ಯಕ್ಷಗಾನ ಕಲೆಯದ್ದೇ ಎರಡು ಮುಖಗಳು. ಹಿಂದೆ ನಡೆಯುತ್ತಿದ್ದ ಪುರಾಣ ಪ್ರವಚನವೇ ನಂತರ ವಾಚನ ಪ್ರವಚನವಾಯಿತು. ಅದಕ್ಕೆ ಹಾಡುಗಾರಿಕೆ ಸೇರಿ ತಾಳ ಮದ್ದಲೆ, ನಾಟ್ಯ ಸೇರಿ ಯಕ್ಷಗಾನವಾಯಿತು ಎಂದು ಪೇಜಾವರ ಶ್ರೀಗಳು ಹೇಳಿದರು.
ಪರ್ಯಾಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ಮಹಾಭಾರತದಲ್ಲಿ ಪ್ರತಿಯೊಂದು ಕಥೆಯೂ ನೀತಿ, ಸತ್ವವುಳ್ಳ ಕಥೆಯಾಗಿದೆ. ಆದರೆ, ಅದನ್ನು ಕೇವಲ ಕೌಟುಂಬಿಕ ಕಲಹವಾಗಿ ಮಾತ್ರ ನೋಡಲಾಗುತ್ತಿದೆ. ಮಹಾಭಾರತ ವೇದಕ್ಕಿಂತಲೂ ಮಿಗಿಲು ಎನ್ನುವುದು ಅದಕ್ಕಿರುವ ಹೆಗ್ಗಳಿಕೆ ಎಂದಭಿಪ್ರಾಯಪಟ್ಟರು.
ತಮ್ಮ ಪರ್ಯಾಯ ಅವಧಿಯಲ್ಲಿ ತಿಂಗಳ ತಾಳ ಮದ್ದಲೆ ಕಾರ್ಯಕ್ರಮದಲ್ಲಿ ಮಹಾಭಾರತದ ಕಥಾನಕವನ್ನೇ ಪ್ರದರ್ಶಿಸಲಾಗಿದೆ. ಕಲಾವಿದರು ಕಥೆಯೊಳಗೆ ತಮ್ಮನ್ನು ಆವಾಹಿಸಿಕೊಂಡು ಅದರ ನಿರೂಪಣೆ ಮಾಡುತ್ತಾರೆ. ತಾಳಮದ್ದಲೆಯಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ಮಾತಿನಿಂದಲೇ ಕಥೆಯನ್ನು ಚಿತ್ರಿಸುವುದು ಸವಾಲಿನ ಕೆಲಸ. ಇಂತಹ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲಾ ತಾಳಮದ್ದಲೆಗಳನ್ನು ಧ್ವನಿ ಮುದ್ರಿಸಿದ ಪಟ್ಟಾಭಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ನಾರಾಯಣ ಎಂ. ಹೆಗಡೆ, ಕಲಾವಿದರನ್ನು ಗೌರವಿಸಲಾಯಿತು.
ದಿನವಿಡೀ 'ಶಲ್ಯ ಪರ್ವ' ಹಾಗೂ 'ಭೀಮ ವಿಜಯ' ಎಂಬ ಕಥಾನಕದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

SCROLL FOR NEXT