ಉಡುಪಿ

ತಾಪಂ ಅನಿರ್ಬಂಧಿತ ಅನುದಾನ ಬಳಕೆಗೆ ನಿರ್ಬಂಧ

ಉಡುಪಿ: ಅನಿರ್ಬಂಧಿತ ಎಂದರೆ ಯಾವುದೇ ನಿರ್ಬಂಧಗಳಿಲ್ಲದ್ದು ಎಂದರ್ಥ. ಆದರೆ ನಮ್ಮ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳಿಗೆ ಈ ಪದದ ಅರ್ಥ ಗೊತ್ತಿಲ್ಲ ಎಂದೆನಿಸುತ್ತಿದೆ...
 ಯಾಕೆಂದರೆ, ರಾಜ್ಯ ಸರ್ಕಾರ ರಾಜ್ಯದ ಪ್ರತಿಯೊಂದು ತಾಪಂಗಳಿಗೆ ಅನಿರ್ಬಂಧಿತ ಅಭಿವೃದ್ಧಿ ಅನುದಾನ ಎಂಬ ಹೆಸರಿನಲ್ಲಿ 1 ಕೋಟಿ ಬಿಡುಗಡೆ ಮಾಡಿದೆ. ಹೆಸರೇ ಹೇಳುವಂತೆ ಯಾವುದೇ ನಿರ್ಬಂಧಗಳಿಲ್ಲದೆ ತಾಪಂಗಳು ತಂತಮ್ಮ ವಿವೇಚನೆ ಮೇರೆಗೆ ತಮ್ಮ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬಳಸಿಕೊಳ್ಳಬೇಕು.
ಅನಿರ್ಬಂಧಿತಕ್ಕೀಗ ನಿರ್ಬಂಧ: ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮೇ 6ರಂದು ತಾಪಂಗಳಿಗೆ ಸುತ್ತೋಲೆಯೊಂದನ್ನು ಕಳುಹಿಸಿದ್ದಾರೆ. ಅದರಲ್ಲಿ ಈ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು ಬಳಸಿಕೊಳ್ಳುವ ಬಗ್ಗೆ ಕೆಲವು ನಿರ್ಬಂಧಗಳನ್ನು ಹೇರಿದ್ದಾರೆ. ಅದೂ ಒಂದೋ ಎರಡೋ ನಿರ್ಬಂಧಗಳಲ್ಲ, ಬರೋಬ್ಬರಿ 47 ನಿರ್ಬಂಧಗಳು.
 ಇವುಗಳಲ್ಲಿ ಬಹುತೇಕ ನಿರ್ಬಂಧನೆಗಳಲ್ಲಿ ಪಾರದರ್ಶಕವಾಗಿ ಅನುದಾನ ಬಳಸಬೇಕು, ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮಂಡಿಸಬೇಕು, ಲೆಕ್ಕಪರಿಶೋಧನೆ ಮಾಡಬೇಕು ಇತ್ಯಾದಿಗಳಿವೆ. ಈ ನಿರ್ಬಂಧನೆಗಳನ್ನು ಪಾಲಿಸಲೇಬೇಕಾದ್ದು. ಆದರೆ ಇನ್ನೂ ಕೆಲವು ನಿರ್ಬಂಧಗಳಿವೆ, ಅವುಗಳ ಪ್ರಕಾರ ಈ ಅನುದಾನವನ್ನು ಬಳಸುವುದಕ್ಕಿಂತ ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸುವುದೇ ಉತ್ತಮ ಎನ್ನುತ್ತಾರೆ ತಾಪಂ ಸದಸ್ಯರು.
ಅನುದಾನ ಬಳಕೆಗೂ ತಡೆಯಾಗುವಂಥ ನಿರ್ಬಂಧಗಳು: ಬಿಡುಗಡೆಯಾಗಿರುವುದು ಕೇವಲ 1 ಕೋಟಿ ಮಾತ್ರ. ಸುತ್ತೋಲೆಯ ನಿರ್ಬಂಧಗಳ ಪ್ರಕಾರ, 90 ಲಕ್ಷ ವನ್ನು ದೀರ್ಘಕಾಲಿಕ ಬಾಳಿಕೆ ಬರುವ ಮೂಲಭೂತ ಸೌಕರ್ಯಗಳನ್ನು (ಕಟ್ಟಡಗಳು) ನಿರ್ಮಿಸಲು ಬಳಸಬೇಕು, ಉದಾ: ಶಾಲೆ, ಅಂಗನವಾಡಿ ಕಟ್ಟಡಗಳಿಗೆ ಬಳಸಬಹುದು. ಉಡುಪಿಯಂತಹ ಜಿಲ್ಲೆಗಳಲ್ಲಿ ಮಕ್ಕಳಿಲ್ಲದೆ ಶಾಲೆಗಳೇ ಮುಚ್ಚುತ್ತಿರುವಾಗ ಶಾಲಾ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ, ಇರುವ ಶಾಲೆಗಳ ಕಟ್ಟಡಗಳು ಚೆನ್ನಾಗಿವೆ. ಹಾಗಾಗಿ ಹೊಸ ನಿರ್ಬಂಧನೆ ಪ್ರಕಾರ ಕಟ್ಟಡಗಳ ನಿರ್ಮಾಣಕ್ಕೆಂದು ಮೀಸಲಾಗಿರುವ ಹಣವನ್ನು ತಾಪಂಗಳು ಬಳಸುವಂತಿಲ್ಲ. ಸುತ್ತೋಲೆ ಪ್ರಕಾರ 1 ಕೋಟಿಯಲ್ಲಿ 25 ಲಕ್ಷವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ತೆಗೆದಿರಿಸಬೇಕು. ಹಾಗಂತ ಈ ಅನುದಾನವನ್ನು ರಸ್ತೆ ದುರಸ್ತಿ, ನಿರ್ವಹಣೆ, ನೀರು ಸರಬರಾಜು ಇತ್ಯಾದಿ ಯೋಜನೆಗಳಿಗೆ ಬಳಸುವಂತಿಲ್ಲ. ರು. 3 ಲಕ್ಷವನ್ನು ಕಡ್ಡಾಯವಾಗಿ ಅಂಗವಿಕಲರ ಅಭಿವೃದ್ಧಿ ಯೋಜನೆಗೆ ತೆಗೆದಿಡಬೇಕು, ಆದರೆ 3 ಲಕ್ಷ ಹಣದಲ್ಲಿ ಏನು ಅಭಿವೃದ್ಧಿ ಯೋಜನೆ ತಯಾರಿಸಬಹುದು ದೇವರೇ ಬಲ್ಲ!
 ಉಡುಪಿಯಂತಹ 41 ಸದಸ್ಯರಿರುವ ತಾಪಂಗಳಲ್ಲಿ 90 ಲಕ್ಷ ಗಳನ್ನು, ಸುತ್ತೋಲೆಯಲ್ಲಿರುವಂತೆ ದೀರ್ಘಕಾಲಿಕ ಯೋಜನೆಗೆ ತಲಾ ಕ್ಷೇತ್ರಕ್ಕೆ 2 ಲಕ್ಷ ಸಿಗುತ್ತದೆ. ಈ 2 ಲಕ್ಷದಿಂದ ಯಾವ ಧೀರ್ಘಕಾಲಿಕ (ಕಟ್ಟಡ, ಸೇತುವೆ) ಯೋಜನೆ ಸಾಧ್ಯ ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕು. ಈ ಅನುದಾನವನ್ನು ತಾಪಂ ಸದಸ್ಯರು ತಂತಮ್ಮ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗಾಗಿ ಹಂಚಿಕೊಳ್ಳುವುದಕ್ಕೂ ಸುತ್ತೋಲೆಯಲ್ಲಿ ನಿರ್ಬಂಧ ಇದೆ. ಅನುದಾನ ಹಂಚಿಕೆಯನ್ನು ಅಧ್ಯಕ್ಷರ ವಿವೇಚನೆಗೆ ಬಿಟ್ಟರೆ ಅಲ್ಲಿ ಮತ್ತೆ ಪಕ್ಷ- ಸೇಡಿನ ರಾಜಕೀಯ ನುಸುಳುತ್ತದೆ. ಆಡಳಿತ ಪಕ್ಷದ ಸದಸ್ಯರೆ ಬಹುಪಾಲು ಲಾಭ ಪಡೆಯುತ್ತಾರೆ, ವಿರೋಧ ಪಕ್ಷಗಳಿಗೆ ಅನ್ಯಾಯ ಆಗುತ್ತದೆ (ಉಡುಪಿ ತಾಪಂನಲ್ಲಿ ಈ ಹಿಂದೆ ಇಂತಹ ಘಟನೆ ನಡೆದಿದೆ.)   ಸುತ್ತೋಲೆಯಲ್ಲಿ, ಈ ಅನುದಾನದಿಂದ ಯಾವುದೇ ಅಭಿವೃದ್ಧಿ ಯೋಜನೆ ತಯಾರಿಸುವಾಗ ಕಡ್ಡಾಯವಾಗಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆಯ ಶಿಫಾರಸ್ಸುಗಳಂತೆ ಯೋಜನೆ ತಯಾರಿಸಬೇಕು ಎಂದಿದೆ. ಅಂದರೆ ಅನುದಾನ ತಾಪಂನದ್ದು, ಯೋಜನೆ ಗ್ರಾಪಂಗಳದ್ದು ಎಂದಾಯಿತು.
ಮೊದಲೇ ತಾಪಂಗಳು ಅನುದಾನ ಇಲ್ಲದೆ ಕೊರಗುತ್ತಿವೆ, ತಾಪಂ ಸದಸ್ಯರು ತಮ್ಮನ್ನು ಆರಿಸಿದ ಮತದಾರರ ಅಶೋತ್ತರಗಳನ್ನು ಈಡೇರಿಸಲಾಗದೇ ಮತದಾರರಿಂದ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಹಾಗಿರುವಾಗ ಸರ್ಕಾರ ನೀಡಿದ 1 ಕೋಟಿ ಅನುದಾನವನ್ನು ಅಧಿಕಾರಿಗಳ ಈ ಎಲ್ಲ ನಿರ್ಬಂಧಗಳಿಂದಾಗಿ ಬಳಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ. ಅನುದಾನ ಬಳಕೆಯಾಗದೇ ಉಳಿದರೂ ಅಚ್ಚರಿ ಇಲ್ಲ.
- ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಒಪ್ಪಂದ ಬೆನ್ನಲ್ಲೇ ಹಾರ್ಮುಜ್‌ನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ, ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ: R Ashok

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ

SCROLL FOR NEXT