ಉಡುಪಿ

ಅಪಘಾತ: ವ್ಯಕ್ತಿ ಸಾವು

ಪಡುಬಿದ್ರಿ: ಇಲ್ಲಿನ ಎರ್ಮಾಳಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಂಪತ್ (30) ಮೃತರು. ಅವರು ತನ್ನ ಬೊಲೆರೋ ಜೀಪಿನನ್ನು ಪಡುಬಿದ್ರಿಗೆ ಹೋಗುವುದಕ್ಕೆ ತಿರುಗಿಸಲು ರಾ.ಹೆ. 66ರ ಡಿವೈಡರ್ ಬಳಿ ನಿಂತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಅತೀ ವೇಗದಿಂದ ಬಂದು ಡಿಕ್ಕಿಯಾಗಿದೆ ಪರಿಣಾಮ ಬೊಲೆರೋ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು ಅದರಲ್ಲಿದ್ದ ಸಂಪತ್ ಎಂಬವರ ತಲೆಗೆ ತೀವ್ರ ಗಾಯಗಳಾದವು. ತಕ್ಷಣ ಅವರನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಗಾಯಗಳಾಗಿರುತ್ತದೆ. ಈ ಬಗ್ಗೆ ಸಂತೋಷ್ ಶೆಟ್ಟಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಹಿಳೆ ಆತ್ಯಹತ್ಯೆ
ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮದ ಸಾಲ್ಮರ ರೈಲ್ವೆ ಟ್ರ್ಯಾಕಿನಲ್ಲಿ ಮಹಿಳೆಯೊಬ್ಬರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಮೃತರು ನಮ್ರತಾ ಕಾಮತ್ (40). ಮಣಿಪಾಲದಲ್ಲಿ ಉದ್ಯೋಗಿಯಾಗಿರುವ ಅವರು ಪತಿಯೊಂದಿಗೆ ಇತ್ತೀಚೆಗೆ ವಿಚ್ಚೇದನ ಪಡೆದಿದ್ದರು ಎನ್ನಲಾಗಿದೆ. ರೈಲಿನ ಹಳಿಯ ಮಧ್ಯೆ ನಿಂತು ಚಲಿಸುತ್ತಿದ್ದ ರೈಲಿನಡಿ ಬಿದ್ದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಶವವು ಸಂಪೂರ್ಣ ಛಿದ್ರವಾಗಿದೆ. ಉಪ್ಪೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ನಾಲ್ವರ ಬಂಧನ
ಉಡುಪಿ: ನಗರದ ಕಲ್ಸಂಕದ ಮನೆಯೊಂದರಲ್ಲಿ ಲಕ್ಷಾಂತರ ರು. ಕಳ್ಳತನ ಮಾಡಿದ್ದ 4 ಮಂದಿ ಆರೋಪಿಗಳನ್ನು ಉಡುಪಿ ಪೊಲೀಸರು 24 ಗಂಟೆಯೊಳಗಾಗಿ ಗುರುವಾರ ಬಂಧಿಸಿದ್ದಾರೆ. ಕಲ್ಸಂಕದ ರಾಘವೇಂದ್ರ ಭಟ್  ಎಂಬವರ ಮನೆಯಿಂದ ಜು. 28ರಂದು ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಹಾಡಹಗಲೇ ಕಳವು ಮಾಡಿದ್ದ ಆರೋಪಿಗಳಾದ ಚಂದ್ರ, ಕಾರ್ತಿಕ್, ಸಂಜು, ರವಿ ಅವರನ್ನು ವೃತ್ತ ನಿರೀಕ್ಷಕ ಮಾರುತಿ ನಾಯಕ್,ನಗರ ಠಾಣಾ ಅಪರಾಧ ಪತ್ತೆ ದಳದ ಎಸ್.ಐ. ರಾಜಗೋಪಾಲ್ ಮತ್ತು ಸಿಬ್ಬಂದಿ ಬಂಧಿಸಿದ್ದು, ಅವರಿಂದ ಕಳವು ಮಾಡಿದ ನಗದು ರು. 1,16,915 ಹಾಗೂ ಯು.ಟಿ.ಐ. ಬ್ಯಾಂಕಿನ ಕ್ರೆಡಿಟ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಕೃತ್ಯಕ್ಕೆ ಬಳಸಿರುವ ಆಟೋ ರಿಕ್ಷಾ ಹಾಗೂ ಮೋಟಾರು ಸೈಕಲ್ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಚಂದ್ರ ಶೆಟ್ಟಿ, ಪ್ರಕಾಶ್, ಯೋಗೀಶ್, ಮೋಹನ್ ಕೊತ್ವಾಲ್, ಸುಧಾಕರ ಭಂಡಾರಿ, ಪ್ರಸನ್ನ ಸಿ., ಶಂಕರ, ಮಲ್ಲೇಶ ಮತ್ತು ಮಂಜುನಾಥ ಎಂ. ಸಹಕರಿಸಿದ್ದಾರೆ.

ಮಂಜೂರಾತಿ ಪತ್ರ ವಿತರಣೆ
ಉಡುಪಿ: ಶಿವಳ್ಳಿ ಮತ್ತು ಹೆರ್ಗದಲ್ಲಿರುವ ನಗರಸಭೆಯ ಉಪ ಕಚೇರಿಗಳಲ್ಲಿ ಸರ್ಕಾರದ ಸೌಲಭ್ಯಗಳಾದ ವಿಧವಾ ವೇತನ, ಮನಸ್ವಿನಿ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಮಂಜೂರಾತಿ ಪತ್ರವನ್ನು ಶಿವಳ್ಳಿಯಲ್ಲಿ 45 ಮತ್ತ ಹೆರ್ಗದಲ್ಲಿ 38 ಫಲಾನುಭವಿಗಳಿಗೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಕಂದಾಯ ನಿರೀಕ್ಷಕ ಶಿವರಾಮ್, ಹೆರ್ಗ ಗ್ರಾಮ ಲೆಕ್ಕಿಗ ವಾಸುದೇವ ಆಚಾರ್ ಮತ್ತು ಶಿವಳ್ಳಿ ಗ್ರಾಮ ಲೆಕ್ಕಿಗ ದೇವೆಂದ್ರ ನಾಯಕ್, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಜ್ಯೋತಿ ನಾಯಕ್ ಸರಳೇಬೆಟ್ಟು, ಗೀತಾ ಶೇಟ್, ಮಾಜಿ ನಗರಸಭಾ ಸದಸ್ಯ ರಾಮದಾಸ್ ನಾಯಕ್, ಸ್ಥಳೀಯರಾದ ಪ್ರಸಾದ್ ರೈ, ಸುಕೇಶ್, ಕುಂದರ್, ಸುರೇಶ್ ಪೂಜಾರಿ, ಸುಜಿತ್ ಶೆಟ್ಟಿಗಾರ್, ಸುಧಾಕರ ಪೂಜಾರಿ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು ಇದ್ದರು.

ಬಹರೇನ್ ಕನ್ನಡೋತ್ಸವ ಮಂಗಳೂರಲ್ಲಿ ನಾಳೆ
ಮಂಗಳೂರು: ಗುರು ಇನ್‌ಸ್ಟಿಟ್ಯೂಟ್ ಹುಬ್ಬಳ್ಳಿ ಹಾಗೂ ಗುರುಬಲ ಎಂಟರ್‌ಟೇನರ್ಸ್ ಬೆಂಗಳೂರು ಇದರ ಸಹಯೋಗದಲ್ಲಿ ನಿರ್ದೇಶಕ ಯಶವಂತ ಸರ್‌ದೇಶಪಾಂಡೆ ನೇತೃತ್ವದಲ್ಲಿ 'ಬಹರೇನ್ ಕನ್ನಡೋತ್ಸವ-2014' ಈ ಬಾರಿ ಆ.3ರಂದು (ಭಾನುವಾರ) ಮಂಗಳೂರಿನಲ್ಲಿ ನಡೆಯುತ್ತಿದೆ.  ಸಂಜೆ 4.30ಕ್ಕೆ ಪುರಭವನದಲ್ಲಿ ಬಹರೇನ್ ಕನ್ನಡೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಗುವುದು. ರಾಜ್ಯ ಯುವಜನ ಸಬಲೀಕರಣ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್ ಆಗಮಿಸುವರು. 'ಕನ್ನಡಪ್ರಭ' ಮತ್ತು 'ಸುವರ್ಣ ನ್ಯೂಸ್‌' ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು ಎಂದು ಬಹರೇನ್ ಕನ್ನಡಿಗ, ಸಂಘಟಕರಾದ ರಮೇಶ್ ಮಂಜೇಶ್ವರ್ ಮತ್ತು ರಮೇಶ್‌ರಾಮಚಂದ್ರನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಈ ಕಾರ್ಯಕ್ರಮದಲ್ಲಿ 'ಭಾರ್ಗವ ವಿಜಯ' ತೆಂಕು-ಬಡಗು ಕೂಡಾಟ, ಕ್ಲಾಸಿಕಲ್, ಸೆಮಿ ಕ್ಲಾಸಿಕಲ್, ಸಿನಿಮಾ ನೃತ್ಯ, ಜಾನಪದ, ಫ್ಯಾಶನ್ ಶೋ, ಸಮಸ್ತ ಕರ್ನಾಟಕದ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುವುದು. ಬಹರೇನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಯಕ್ಷಗಾನ ತಂಡ ಸಂಘಟಿಸಿ ನಿರಂತರವಾಗಿ ಯಕ್ಷಗಾನ ಪ್ರದರ್ಶನ ನೀಡಲಾಗುತ್ತಿದೆ ಎಂದರು. ಈ ಯಕ್ಷಗಾನ ಕಲಾವಿದರು ಬಹರೇನ್ ಅನಿವಾಸಿ ಕನ್ನಡಿಗರು. ವಿವಿಧ ನೃತ್ಯರೂಪಕಗಳಲ್ಲಿ ಬಹರೇನ್‌ನ ಶಾಲಾ ಮಕ್ಕಳು ಮಿಂಚಲಿದ್ದಾರೆ. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್ ಚಿತ್ರಗಳ ನೃತ್ಯ ಏರ್ಪಡಲಿದೆ. ಉತ್ತರ ಕನ್ನಡದ ಜಾನಪದ ನೃತ್ಯ, ಕೋಲಾಟವೂ ನಡೆಯಲಿದೆ. ನಮ್ಮ ಟೀವಿ ಮಾಧ್ಯಮ ಪಾಲುದಾರಿಕೆ ವಹಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಎಂದು ತಿಳಿಸಿದರು.

ಸ್ವಾತಂತ್ರ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ
ಮಣಿಪಾಲ: ಅಜ್ಜರಕಾಡು ಮೈದಾನದಲ್ಲಿ ಆ. 15ರಂದು ನಡೆಯುವ ಉಡುಪಿ ಜಿಲ್ಲಾ ಸ್ವಾತಂತ್ರ್ಯೋತ್ಸವ ಅರ್ಥ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಕುಮಾರ್  ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು. ಇಲ್ಲಿನ ಎಂಜಿಎಂ ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ಮಳೆಗಾಲದಲ್ಲಿ ಆಚರಣೆಗೆ ತೊಂದರೆಯಾಗದಂತೆ ಉತ್ತಮ ವೇದಿಕೆ ಸಜ್ಜುಗೊಳಿಸಲು ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಗೆ, ಉಪಾಹಾರ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದವುಗಳನ್ನು ವಿವಿಧ ಸಮಿತಿಗಳಿಗೆ ಹೊಣೆ ವಹಿಸಲಾಯಿತು.
ವಿದ್ಯಾರ್ಥಿಗಳಿಗೆ ಸನ್ಮಾನ: ಜನ ಗಣತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿದವರಿಗೆ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲು ನಿರ್ಧರಿಸಲಾಯಿತು.  ಸಾಂಸ್ಕೃತಿಕ ಕಾರ್ಯಕ್ರಮ ಹೊಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲಾಯಿತು.
ಜಿ.ಪಂ. ಉಪಕಾರ್ಯದರ್ಶಿ ಪ್ರಾಣೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಜೇಸಿಯಿಂದ ಸೊಳ್ಳೆ ಪರದೆ ವಿತರಣೆ 31ರಿಂದ
ಗೋಣಿಕೊಪ್ಪಲು: ಮಲೇರಿಯಾ, ಡೆಂಘೀ ನಿರ್ಮೂಲನೆಗಾಗಿ ಆ. 31ರಿಂದ ಹಾಡಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಿದ್ದೇವೆ ಎಂದು ಜೂನಿಯರ್ ಚೇಂಬರ್ ವಲಯ 14 ಅಧ್ಯಕ್ಷ ಮುಲ್ಲೇಂಗಡ ಮದೋಷ್ ಪೂವಯ್ಯ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲು ಅಂದು ಜೂನಿಯರ್ ಚೇಂಬರ್‌ನ ರಾಷ್ಟ್ರಾಧ್ಯಕ್ಷ ದೀಪಕ್ ನಾಹರ್ ಕೊಡಗು ಜಿಲ್ಲೆಗೆ ಆಗಮಿಸಲಿದ್ದಾರೆ. ಮ. 3.00 ಗಂಟೆಗೆ ಕೊಡಗು ಗಡಿ ಆನೆಚೌಕೂರು ಗೇಟ್ ಬಳಿ ಅವರನ್ನು ಬರಮಾಡಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಂತರ ಗಡಿ ಭಾಗದಲ್ಲಿ ಸಸಿನೆಟ್ಟು, ದುಷ್ಕೃತ್ಯಕ್ಕೆ ನಾಶಗೊಂಡ ಕಾಡಿನಲ್ಲಿ ಹುಲ್ಲು ಬೀಜ ಬಿತ್ತಿ ವನ್ಯಪ್ರಾಣಿಗಳಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಹಾಡಿ ಜನತೆಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ನಂತರ ಮೆಡಿಕೋಟೆಡ್ ಸೊಳ್ಳೆ ಪರದೆ ನೀಡಲಾಗುವುದು. ಇದರಲ್ಲಿ ಔಷಧೀಯ ಗುಣಗಳಿರುವುದರಿಂದ ಸೊಳ್ಳೆಗಳ ನಿರ್ಮೂಲನೆಗೆ ಸಹಕಾರಿಯಾಗಲಿದೆ. ಸೊಳ್ಳೆಗಳ ಮೂಲಕ ಹರಡುವ ರೋಗಗಳನ್ನು ತಡೆಗಟ್ಟಲು ಇಂತಹ ಯೋಜನೆ ರೂಪಿಸಲಾಗಿದೆ ಎಂದರು. ಚೇಂಬರ್‌ನ ಸಲಹೆಗಾರ ಸೈಮನ್ ಮಾತನಾಡಿ, ಗೋಣಿಕೊಪ್ಪದಲ್ಲಿ ಸ್ವಾಗತ ಫಲಕ, ಬಾಳೆಲೆ ಮಾರ್ಗದಲ್ಲಿ ಮಾರ್ಗಸೂಚಿ ಫಲಕ, ಪೊನ್ನಂಪೇಟೆ ಕಾನೂರು ರಸ್ತೆ ಜಂಕ್ಷನ್‌ನಲ್ಲಿ ಗ್ರಾಮದ ದಿಕ್ಸೂಚಿ, ಹುದಿಕೇರಿಯಲ್ಲಿ ಸ್ವಾಗತ ಫಲಕ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಉಪಯುಕ್ತವಾದ ಕಾರ್ಯಕ್ರಮಕ್ಕೆ ಇದೇ ದಿನ ಚಾಲನೆ ನೀಡಲಾಗುವುದು ಎಂದರು. ಅಭಿವೃದ್ಧಿ ಮತ್ತು ಬೆಳವಣಿಗೆ ಯೋಜನೆ ಮೂಲಕ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸ್ಕಾಲರ್‌ಶಿಪ್ ಇಂತಹ ಸೌಲಭ್ಯಗಳನ್ನು ಮತ್ತು ಆಯಾಯ ವಿಭಾಗದ ಘಟಕಗಳ ಮೂಲಕ ಮಾರ್ಗಸೂಚಿ ಫಲಕ ಕಾರ್ಯಕ್ರಮ ಮತ್ತು ಹುಲ್ಲು ಬೀಜ ಬಿತ್ತನೆ ಕಾರ್ಯಕ್ರಮವನ್ನು ಹಂತಹಂತವಾಗಿ ವಿಸ್ತರಿಸಲಾಗುವುದು ಎಂದು ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಯೋಜನಾ ನಿರ್ದೇಶಕ ಕೊಟ್ಟಂಗಡ ರಾಜಾ ಸುಬ್ಬಯ್ಯ ತಿಳಿಸಿದರು. ಗೋಷ್ಠಿಯಲ್ಲಿ ವಲಯ ಉಪಾಧ್ಯಕ್ಷ ಉಳುವಂಗಡ ಲೋಹಿತ್ ಭೀಮಯ್ಯ, ಜೆಸಿಐ ಪೊನ್ನಂಪೇಟೆ ನಿಸರ್ಗ ಅಧ್ಯಕ್ಷ ರಾಮ್ದಾಸ್ ಉಪಸ್ಥಿತರಿದ್ದರು.

ಸುಂಟಿಕೊಪ್ಪ ಸ. ಪ್ರೌಢಶಾಲೆ: ಪರಿಸರ ದಿನಾಚರಣೆ
ಸುಂಟಿಕೊಪ್ಪ:  ಇಕೋ ಕ್ಲಬ್ ಮತ್ತು ವಿಜ್ಞಾನ ಸಂಘ ಹಾಗೂ ಕೊಡಗು ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನ ಮತ್ತು ವನಮಹೋತ್ಸವದ ಅಂಗವಾಗಿ 100 ಅರಣ್ಯ ಗಿಡಗಳನ್ನು ನೆಡಲಾಯಿತು. ಇದೇ ವೇಳೆ ಸರ್ಕಾರಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೂ ಸೇರಿದಂತೆ ಅರಣ್ಯ ಇಲಾಖೆ ವತಿಯಿಂದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ 500 ಅರಣ್ಯ ಸಸಿಗಳನ್ನು ವಿತರಿಸಲಾಯಿತು. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಧನಂಜಯ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಂ.ಎ. ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಪಿ.ಎಂ. ಲತೀಫ್ ಮಾತನಾಡಿದರು. ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಂ.ಅಚ್ಚಪ್ಪ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದರು. ಮಡಿಕೇರಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಾದ ಎ.ಎಂ.ಚಂಗಪ್ಪ, ದೇವನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವೈ.ಎಂ. ಕರುಂಬಯ್ಯ, ಗ್ರಾಪಂ ಸದಸ್ಯರಾದ ಕೆ.ಇ. ಕರೀಂ, ಸುಕುಮಾರ್, ಪ್ರಾಂಶುಪಾಲರಾದ ಡಾ. ಎಂ.ವಿ. ರಮಾ, ಮುಖ್ಯ ಶಿಕ್ಷಕ ಬಾಲಕೃಷ್ಣ, ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ, ಸಂತಮೇರಿ ಶಾಲೆಯ ಮುಖ್ಯ ಶಿಕ್ಷಕ ಆರ್.ಸೆಲ್ವರಾಜ್ ಇದ್ದರು. ಶಿಕ್ಷಕ ಸಿ.ಟಿ. ಸೋಮಶೇಖರ್ ಸ್ವಾಗತಿಸಿದರು. ಶಿಕ್ಷಕ ಎಸ್.ಟಿ. ವೆಂಕಟೇಶ್ ವಂದಿಸಿದರು. ಉಪನ್ಯಾಸಕ ಎಸ್.ಎಚ್. ಈಶ ನಿರ್ವಹಿಸಿದರು. ವಿದ್ಯಾರ್ಥಿಗಳಾದ ನೇಹಾ ಮತ್ತು ಐಶ್ವರ್ಯ ತಂಡದವರು ಪರಿಸರ ಗೀತೆ ಹಾಡಿದರು.

ಡಾ. ಪಾರ್ವತಿ ಅಪ್ಪಯ್ಯ ಪ್ರಬಂಧ ಮಂಡನೆ
ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ಜು.19 ರಿಂದ 24ರ ವರೆಗೆ Montreal, Canada ದಲ್ಲಿ ನಡೆದ 23ನೇ ಅಂತಾರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ   Social Quotas in Gender Quotas- Is it the way out for gender justice ಎಂಬ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಸಮಾವೇಶದಲ್ಲಿ ಸುಮಾರು 85 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದು 2- 3 ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನವಾಗಿದೆ. ಡಾ. ಪಾರ್ವತಿ ಅಪ್ಪಯ್ಯ ಈ ಮೊದಲು ಆಸ್ಟ್ರೇಲಿಯಾದ  ಬ್ರಿಸ್ಬೇನ್‌ನಲ್ಲಿಯೂ, ಕೆನಡಾದ ಒಟಾವೋದಲ್ಲಿ ಸ್ಪೇನ್‌ನ ಮೇಡ್ರಿಡ್‌ನಲ್ಲಿ ನಡೆದ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದರು.

ಕೊಡ್ಲಿಪೇಟೆ ಕಾಲೇಜು ಮಾನವ ಸಂಪನ್ಮೂಲ ಘಟಕ ಉದ್ಘಾಟನೆ
ಶನಿವಾರಸಂತೆ: ನಮ್ಮ ಜೀವನದ ಅಳಿವು ಉಳಿವು ನಮ್ಮಲ್ಲೇ ಇದೆ. ಪ್ರತಿಯೊಬ್ಬ ಮಾನವ ಅಳಿವನ್ನು ಹೊಂದದೆ ಉಳಿವಿಗಾಗಿ ಶ್ರಮಿಸಬೇಕು. ನಾವು ಪದೇ ಪದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಭಿವೃದ್ಧಿ ಸಾಧಿಸಬೇಕೆಂದು ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ಸತೀಶ್ ಎಂ. ತಿಳಿಸಿದರು. ಅವರು ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ವರ್ಷದ ಮಾನವ ಸಂಪನ್ಮೂಲ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷರಾದ ಎಚ್.ಎಸ್. ಗಿರೀಶ್ ಮಾತನಾಡಿದರು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಅಭಿಲಾಷ್ ಅವರು ವಾಲ್ ಮ್ಯಾಗಜಿನ್ನಿನ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶಂಭುಲಿಂಗಪ್ಪ, ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ನಿರಂಜನ್, ಘಟಕದ ಮೇಲ್ವಿಚಾರಕಿಯರಾದ ಶಶಿಕಲಾ ಮನು, ವೀಣಾ ಮಂಜುನಾಥ್, ಉಪನ್ಯಾಸಕ ವೃಂದ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ಆಸಿಫ್ ಸ್ವಾಗತಿಸಿದರು. ನಿಸಾರ್ ಬಿ.ಎ. ನಿರೂಪಿಸಿದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಅನೂಷ ಕೆ.ಎಂ. ವಂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್‌ ಇಂಧನ ಕೇಂದ್ರಗಳ ಮೇಲೆ ದಾಳಿಯನ್ನು 'ಒಪ್ಪಲಾಗದು': ಅನಿಲ ಪೂರೈಕೆ ಸಮಸ್ಯೆ ಬಗ್ಗೆ ಭಾರತ ಕಳವಳ!

ಯುಗಾದಿ ಹಬ್ಬದಂದೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಇಂದಿನ ದರವೆಷ್ಟು?

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

North Korea Election: ಇತಿಹಾಸದಲ್ಲೇ ಮೊದಲು; Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ

KD Movie: Nora Fatehi ವಿರುದ್ಧ ಮುಸ್ಲಿಂ ಬೋರ್ಡ್ ಫತ್ವಾ ಜಾರಿ..!

SCROLL FOR NEXT