ಗೋಣಿಕೊಪ್ಪಲು: ಬಲ್ಯಮುಂಡೂರು ಗ್ರಾಮದ ಕೊಟ್ಟಂಗಡ ರಾಜಾ ಕಾರ್ಯಪ್ಪ ಹಾಗೂ ಕೊಟ್ಟಂಗಡ ಅಚ್ಚಯ್ಯ ಅವರ ಕಾಫಿ ತೋಟದಲ್ಲಿ ಬೆಳೆಯಲಾದ ಲಕ್ಷಾಂತರ ಮೌಲ್ಯದ ಕಾಳು ಮೆಣಸು ಬಳ್ಳಿಯನ್ನು ನಾಶಪಡಿಸಿದ ಪ್ರಕರಣ ತನಿಖಾ ಹಂತದಲ್ಲಿದ್ದು, ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಅಪರಿಚಿತರು ಜು. 24, 25 ರಂದು ರಾತ್ರಿ ತೋಟಕ್ಕೆ ಪ್ರವೇಶಿಸಿ ಕೊಟ್ಟಂಗಡ ರಾಜಾ ಕಾರ್ಯಪ್ಪ ಅವರ ಫಸಲು ಬಿಟ್ಟಿದ್ದ ಸುಮಾರು 167 ಕಾಳು ಮೆಣಸು ಬಳ್ಳಿ ಹಾಗೂ ಕೊಟ್ಟಂಗಡ ಅಚ್ಚಯ್ಯ ಅವರ ಸುಮಾರು 30 ಮೆಣಸು ಬಳ್ಳಿಗಳನ್ನು ಬುಡದಿಂದ ಕಡಿದು ನಷ್ಟ ಪಡಿಸಿದ್ದರು. ಸುಮಾರು 22 ವರ್ಷಗಳಿಂದ ಕಾಳು ಮೆಣಸು ಬಳ್ಳಿಯನ್ನು ಪೋಷಿಸುತ್ತಾ ಬಂದಿದ್ದ ಕೊಟ್ಟಂಗಡ ಕಾರ್ಯಪ್ಪ ಅವರ ಒಂದು ಮರದಲ್ಲಿ ಹಬ್ಬಿಸಲಾಗಿದ್ದ ಬಳ್ಳಿಯಲ್ಲಿ ಸುಮಾರು ಒಂದು ಕ್ವಿಂಟಾಲ್ ಕಾಳು ಮೆಣಸು ಉತ್ಪಾದನೆಯಾಗುತ್ತಿತ್ತು ಎಂದು ಪ್ರದೀಪ್ ಅವರಲ್ಲಿ ತಮ್ಮ ಅಳಲು ತೋಡಿಕೊಂಡರಲ್ಲದೆ, ಸುಮಾರು ರು. 70 ಲಕ್ಷ ನಷ್ಟ ಸಂಭವಿಸಿರುವುದಾಗಿ ತಿಳಿಸಿದರು.
ಈ ಹಂತದಲ್ಲಿ ಸಾಂತ್ವನ ನೀಡಿದ ಪ್ರದೀಪ್, ಈಗಾಗಲೇ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಬಗ್ಗೆ ಕೂಲಂಕಷ ತನಿಖೆ ಮಾಡಲು ಮನವಿ ಮಾಡಲಾಗಿದ್ದು, ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ಆರೋಪಿಗಳ ಪತ್ತೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಇಂತಹ ಅಪರೂಪದ ಹಾಗೂ ನೀಚ ಪ್ರವೃತ್ತಿಯ ಘಟನೆ ನಡೆದಿರುವುದು ಜಿಲ್ಲೆಯಲ್ಲಿ ಇದೇ ಪ್ರಥಮ. ಈ ಹಿಂದೆ ನಾಪೋಕ್ಲು ವ್ಯಾಪ್ತಿಯಲ್ಲಿ ಇಂತಹಾ ಸಣ್ಣ ಪ್ರಮಾಣದ ಘಟನೆ ನಡೆದಿದ್ದು, ಇಂತಹಾ ದುಷ್ಕೃತ್ಯದಿಂದ ಏನನ್ನೂ ಸಾಧಿಸುವುದೂ ಅಸಾಧ್ಯ. ಅಂತಹಾ ವ್ಯಕ್ತಿಗಳಿಗೆ ಕಾಲವೇ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.
ವರ್ಷಂಪ್ರತೀ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಹಾನಿ ಸಂಭವಿಸುತ್ತಿದ್ದು, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವು ನಷ್ಟದ ಅಂದಾಜು ವರದಿಯನ್ನು ಶೀಘ್ರವೇ ಮಾಡುವಂತೆ, ಆಗಸ್ಟ್ 14, 15 ರಂದು ಗೃಹಮಂತ್ರಿ ಹಾಗೂ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದು ವಿಶೇಷ ಪ್ಯಾಕೇಜ್ ಅಥವಾ ಪರಿಹಾರಕ್ಕಾಗಿ ಮನವಿ ಮಾಡಲಾಗುವು ಎಂದರು.
ಕಂದಾಯ ಇಲಾಖೆ, ಕೃಷಿ ಇಲಾಖೆಗಳು ಕೃಷಿಕರೊಂದಿಗೆ ಪೂರಕವಾಗಿ ಸ್ಪಂದಿಸಿ ನಷ್ಟದ ಅಂದಾಜು ಮಾಡಬೇಕಾಗಿದೆ. ಕಂದಾಯ ಇಲಾಖಾಧಿಕಾರಿಗಳು ತುರ್ತು ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ತಹಸೀಲ್ದಾರರು ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ ಕಾರ್ಯೋನ್ಮುಖರಾಗುವಂತೆ ಪ್ರದೀಪ್ ತಿಳಿಸಿದರು.
ಬಲ್ಯಮುಂಡೂರುವಿನ ಕಾಳು ಮೆಣಸು ಬಳ್ಳಿ ಧ್ವಂಸಕ್ಕೆ ಕಾರಣವಾದಂತೆ ಕೆಲವು ಸಂಶಯಾತ್ಮಕ ವ್ಯಕ್ತಿಯ ಬಗ್ಗೆ ಶ್ರೀಮಂಗಲ ಠಾಣೆಗೆ ಫಿರ್ಯಾದಿದಾರರು ದೂರು ನೀಡಿದ್ದು, ಈಗಾಗಲೇ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಪೊಲೀಸ್ ಉಪನಿರೀಕ್ಷಕ ನಂಜುಂಡ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದರೂ, ತನಿಖೆ ಮಂದಗತಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರಿಗೆ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಒಪ್ಪಿಸಬೇಕು ಎಂದು ಕೆಲವು ಬೆಳೆಗಾರರು ಪ್ರದೀಪ್ ಅವರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಪ್ರಮುಖ ಸರ ಚಂಗಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಮತ್ರಂಡ ದಿಲ್ಲು, ಮೀದೇರಿರ ನವೀನ್, ಅಣ್ಣಳಮಾಡ ಲಾಲಾ ಅಪ್ಪಣ್ಣ, ವಿಶು ಇದ್ದರು.