ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯಿಂದ ಮನೆ ಕಳೆದುಕೊಂಡು ನಿರ್ವಸಿತರಾದವರಿಗೆ ಉಚಿತ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಘೋಷಿಸಿದ್ದಾರೆ.
ಅವರು ಭಾನುವಾರ ಇಲ್ಲಿನ ಕೋಟದಲ್ಲಿರುವ ನಾಡ ಕಚೇರಿಯಲ್ಲಿ ಮಳೆಯಿಂದ ವಿವಿಧ ರೀತಿಯಲ್ಲಿ ಸಂಕಷ್ಟಕ್ಕೊಳಗಾದ 7 ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ವಿತರಿಸಿ ಮಾತನಾಡಿದರು.
ಮಳೆಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಬಸವ ವಸತಿ ಯೋಜನೆಯಡಿಯಲ್ಲಿ ಉಚಿತವಾಗಿ ಮನೆ ನಿರ್ಮಿಸಿಕೊಡುವಂತೆ ಸಚಿವರು ಸ್ಥಳದಲ್ಲಿಯೇ ಕುಂದಾಪುರ ಉಪವಿಭಾಗಾಧಿಕಾರಿ ಯೋಗೇಶ್ವರ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಹಾನಿಗೊಳಗಾದ ಮನೆಗಳ ವರದಿಯನ್ನು ಆದಷ್ಟು ಶೀಘ್ರದಲ್ಲಿ ಸಿದ್ಧಪಡಿಸಿ, ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಆದಷ್ಟು ಹೆಚ್ಚಿನ ಪರಿಹಾರವನ್ನು ಪರಿಹಾರವನ್ನು ವಿತರಿಸುವಂತೆ ಸಚಿವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೇ ನೆರೆಯಿಂದ ಸಂಭವಿಸಬಹುದಾದ ತೊಂದೆಗಳ ಸಂದರ್ಭದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ ಮೊದಲ ಹಂತದಲ್ಲಿ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ತರನ್ನು ಭೇಟಿ ಮಾಡಿ, ಕೂಡಲೇ ತಾತ್ಕಾಲಿಕ ಪರಿಹಾರವನ್ನು ವಿತರಿಸುತ್ತಿದು, ನಷ್ಟದ ಅಂದಾಜು ವರದಿಯ ನಂತರ ಸಂಪೂರ್ಣ ಪರಿಹಾರವನ್ನು ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಎಲ್ಲಾ ವಸತಿ ಪ್ರದೇಶದ ವರದಿ ಹಾಗೂ ಮಳೆ ನಿಂತ ನಂತರ ಕೃಷಿ ಪ್ರದೇಶ ಮತ್ತು ಬೆಳೆ ಹಾನಿಯ ವಿವರಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಹೆಚ್ಚಿನ ಪರಿಹಾರದ ಬಿಡುಗಡೆಗೆ ಸರ್ಕಾರವನ್ನು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವರು ಬ್ರಹ್ಮಾವರ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿಯೂ 7 ಮಂದಿ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ವಿತರಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕರಾದ ಸುಧಾಕರ ಶೆಟ್ಟಿ ಇದ್ದರು.