ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರು ಗ್ರಾಮದ ಕರ್ವೇಲು- ಮಾಡತ್ತಾರು ರಸ್ತೆಯ ಪಳಿಕೆ ಎಂಬಲ್ಲಿ ಮಳೆ, ಗಾಳಿಗೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಪಾದಚಾರಿ ಮಹಿಳೆ ಸಾವೀಗೀಡಾದ ಘಟನೆ ಸೋಮವಾರ ಸಂಭವಿಸಿದೆ.
ಬಿಳಿಯೂರು ಗ್ರಾಮದ ಕುಡ್ತಕುಮೇರು ನಿವಾಸಿ ಗೋಪಾಲ ನಾಯ್ಕರ ಪತ್ನಿ ಬೇಬಿ ಅಲಿಯಾಸ್ ಶಾಲಿನಿ (35) ಮೃತ ಮಹಿಳೆ.
ಶಾಲಿನಿ ಎಂದಿನಂತೆ ಬೆಳಗ್ಗೆ ಕರ್ವೇಲಿನಲ್ಲಿರುವ ಬೀಡಿ ಬ್ರಾಂಚ್‌ಗೆ ಹೋಗಿ ಬೀಡಿ ನೀಡಿ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಮೇಲ್ಭಾಗದಲ್ಲಿ ಆವರಿಸಿ ಬೆಳೆದಿದ್ದ ಮರವೊಂದು ಮಳೆ ವೇಳೆ ಬೀಸಿ ಬಂದ ಗಾಳಿ ಹೊಡೆತಕ್ಕೆ ಸಿಲುಕಿ ಶಾಲಿನಿ ಮೇಲೆಯೇ ಬಿದ್ದ ಕಾರಣ ಅವರು ಗಂಭೀರ ಗಾಯಗೊಂಡರು. ಘಟನೆ ಸಂಭವಿಸಿದ ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ಸ್ಥಳೀಯರು ಅವರನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿ ಮಧ್ಯೆಯೇ ಅವರು ಸಾವಿಗೀಡಾದರು. ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಸುಬ್ರಹ್ಮಣ್ಯ: ಕುಮಾರಧಾರಾ ಸೇತುವೆ ಮತ್ತೆ ಮುಳುಗಡೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಕೂಡ ಸಾಧಾರಣ ಮಳೆಯಾಗಿದ್ದು ಮಧ್ಯಾಹ್ನದ ಬಳಿಕ ಮಳೆ ತೀವ್ರತೆ ಪಡೆದಿದೆ. ಘಟ್ಟ ಪರಿಸರದಲ್ಲಿ ಮಳೆ ಅಧಿಕಗೊಂಡ ಪರಿಣಾಮ ಸಂಜೆ 3.30ರ ವೇಳೆಗೆ ಧಿಡೀರ್ ಆಗಿ ಮತ್ತೆ ಕುಮಾರಧಾರಾ ಸೇತುವೆ ಮುಳುಗಡೆಗೊಂಡಿದ್ದು ತಡರಾತ್ರಿ ವರೆಗೂ ಜಲಾವೃತ ಪರಿಸ್ಥಿತಿ ಮುಂದುವರಿಯಿತು.
ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಸಂಜೆ ಹೊತ್ತು ಶಾಲಾ ಬಿಡುವಿನ ವೇಳೆ ಆದುದರಿಂದ ವಿದ್ಯಾರ್ಥಿಗಳು ಕುಮಾರಧಾರಾ ದಡದಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಸುಬ್ರಹ್ಮಣ್ಯ ಸೇರಿದಂತೆ ಅಸುಪಾಸಿನಲ್ಲಿ ಹಗುರ ಮಳೆ ಮುಂದುವರಿದಿದೆ. ಘಟ್ಟ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು ಸುಬ್ರಹ್ಮಣ್ಯ ಸಮೀಪದ ಈ ಸಂಪರ್ಕ ಸೇತುವೆ ಪದೇ ಪದೇ ಜಲಾವೃತವಾಗುತ್ತಿದೆ.