ಗಂಗೊಳ್ಳಿ: ರಾಜ್ಯದಲ್ಲಿ ಸ್ತ್ರೀಯರ ಹಾಗೂ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿದ್ದು, ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ, ಕ್ರೂರತ್ವ ಕಾಣುತ್ತಿದ್ದೇವೆ. ಭರವಸೆ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸುವ ವಿದ್ಯಾಲಯಗಳಲ್ಲಿ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಜಮಾತ್ ಇಸ್ಲಾಮಿ ಹಿಂದ್‌ನ ಉಡುಪಿ ಮಹಿಳಾ ಘಟಕದ ಸಂಚಾಲಕಿ ಸಮೀನಾ ಹೇಳಿದರು.
ಅವರು ಬುಧವಾರ ಗಂಗೊಳ್ಳಿಯ ಜಮಾತ್ ಇಸ್ಲಾಮಿ ಹಿಂದ್ ಗಂಗೊಳ್ಳಿ ಮಹಿಳಾ ಘಟಕ, ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯದ ವಿರುದ್ಧ ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ಸೂಕ್ತ ರಕ್ಷಣೆಗಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು.
ಅತ್ಯಾಚಾರ, ದೌರ್ಜನ್ಯಗಳು, ಮಹಿಳೆಯರ ನಾಪತ್ತೆ ಮೊದಲಾದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೆ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ಇದಕ್ಕೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜಮಾತ್ ಇಸ್ಲಾಮಿ ಹಿಂದ್‌ನ ಉಡುಪಿ ಮಹಿಳಾ ಘಟಕದ ಅಧ್ಯಕ್ಷೆ ಹುಲ್ಸಮ್, ಜಮಾತ್ ಇಸ್ಲಾಮಿ ಹಿಂದ್‌ನ ಗಂಗೊಳ್ಳಿ ಮಹಿಳಾ ಘಟಕದ ಅಂಜುಮ್ ಜುಹಾನ್, ಗುಲ್ನಾರ್, ರಿಜ್ವಾನಾ, ಫರ್ಜಾನಾ, ಜಮಾತ್ ಇಸ್ಲಾಮಿ ಹಿಂದ್‌ನ ಗಂಗೊಳ್ಳಿ ಘಟಕದ ಅಧ್ಯಕ್ಷ ಮನ್ಸೂರ್ ನಾಕುದಾ, ಎಂ.ಎಚ್. ಇಕ್ಬಾಲ್, ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷೆ ಪ್ರೀತಿ ಕ್ರಾಸ್ತಾ, ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಸ್ವಸಹಾಯ, ಸ್ತ್ರೀ- ಶಕ್ತಿ ಸಂಘಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಬಳಿಕ ಗಂಗೊಳ್ಳಿ ಗ್ರಾಮ ಪಂಚಾಯಿತಿ ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಖಾರ್ವಿ, ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ, ಪಿಡಿಒ ಟಿ. ಸೀತಾ ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಗೋವರ್ದನ ಎಂ. ಮನವಿ ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರಾಜ ಖಾರ್ವಿ, ಗೋಪಾಲ ಖಾರ್ವಿ, ಯೂನಸ್ ಸಾಹೇಬ್ ಇದ್ದರು.