ಉಡುಪಿ: ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮೂರು ತಿಂಗಳ ಹಿಂದೆ ಅನಾಥನಂತೆ ಪತ್ತೆಯಾಗಿ, ಇದೀಗ ಉಡುಪಿ ಸಮೀಪದ ಕೋಟೇಶ್ವರದ ಸ್ಪೂರ್ತಿಧಾಮದಲ್ಲಿ ಆಶ್ರಯ ಪಡೆದಿರುವ ಬಾಲಕ ಲಿಂಗರಾಜು (3)ನ ಹೆತ್ತವರು ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿಚಿತ್ರ ಎಂದರೆ ತುಂಬಾ ಮುದ್ದಾಗಿರುವ ಈ ಮಗುವಿನ ತಾಯಿ ಕಸ್ತೂರಿ. ಈಕೆ ತನ್ನ 7 ತಿಂಗಳ ಹೆಣ್ಣುಮಗುವನ್ನು ಬಾವಿಗೆಸೆದು ಕೊಂದು, ಈ ಗಂಡುಮಗುವನ್ನು ಕೂಡ ಕೊಲ್ಲುವುದಕ್ಕೆ ಪ್ರಯತ್ನಿಸಿದ್ದಳು. ಆದರೆ ಮಗು ತಾಯಿಯಿಂದ ತಪ್ಪಿಸಿಕೊಂಡಿದ್ದರಿಂದ ಇವತ್ತು ಬದುಕಿ ಉಳಿದಿದೆ.
ಏನಿದರ ಹಿನ್ನೆಲೆ?: ಮೂಲತಃ ಬಾಗಲಕೋಟೆಯ ಬಾದಾಮಿ ತಾಲೂಕಿನ ಕಸ್ತೂರಿ ಮತ್ತು ಬಸಪ್ಪ ದಂಪತಿ ಮಗು ಇದು. ಗಂಡ ಹೆಂಡತಿ ಸದಾ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಹೆಂಡತಿ ಕಸ್ತೂರಿ 7 ತಿಂಗಳ ಕೂಸನ್ನು ಬಾವಿಗೆ ಎಸೆದು ತಾನೂ ಬಾವಿಗೆ ಹಾರಿದ್ದಳು. ಈ ಗಂಡು ಮಗ ಲಿಂಗರಾಜುವನ್ನು ಬಾವಿಗೆ ಎಸೆಯಲು ಯತ್ನಿಸಿದ್ದಳು. ಆದರೆ ಮಗು ಅದೃಷ್ಟಾವಷತ್ ತಪ್ಪಿಸಿಕೊಂಡಿತ್ತು. ನಂತರ ಕಸ್ತೂರಿಯನ್ನೂ ಯಾರೋ ಬಾವಿಯಿಂದ ಮೇಲೆತ್ತಿ ಬದುಕಿಸಿದ್ದಾರೆ.
ಲಿಂಗರಾಜು ಅಲ್ಲಿಂದ ತಪ್ಪಿಸಿ ಯಾರದ್ದೋ ಟ್ರಾಕ್ಸ್ ಹತ್ತಿ ಕೂತುಕೊಂಡಿದ್ದ. ಅದು ಶಿವಮೊಗ್ಗದ ಟ್ರಾಕ್ಸ್, ಅಲ್ಲಿ ಟ್ರಾಕ್ಸ್‌ನವರು ಆತನನ್ನು ನೋಡಿ ಬಸ್ಸು ನಿಲ್ದಾಣದಲ್ಲಿ ಇಳಿಸಿ ಹೋಗಿದ್ದರು. ನಂತರ ಆತ ಪೊಲೀಸರ ವಶಕ್ಕೆ ಸಿಕ್ಕಿ, ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರವಾಗಿದ್ದ. ಅಲ್ಲಿಂದ ಕೋಟೇಶ್ವರದ ಸ್ಪೂರ್ತಿಧಾಮಕ್ಕೆ ಸೇರಿಸಲಾಗಿತ್ತು.
ಇತ್ತೀಚೆಗೆ ಸ್ಪೂರ್ತಿಧಾಮದ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಮಗುವನ್ನು ಮಾಧ್ಯಮದ ಮುಂದೆ ಹಾಜರು ಮಾಡಿ, ಈ ಮಗುವಿನ ಹೆತ್ತವರನ್ನು ಗುರುತಿಸಲು ಸಹಾಯ ಕೇಳಿದ್ದರು. ಆಗ ಲಿಂಗರಾಜು ತನ್ನ ಹೆಸರನ್ನು ವೆಂಕಟೇಶ ಮತ್ತು ದುರ್ಗಾ ಎಂದು ಹೇಳಿಕೊಂಡಿದ್ದ. ತಂದೆ ತಾಯಿ, ಊರು ಯಾವುದೂ ಗೊತ್ತಿಲ್ಲ ಎನ್ನುತ್ತಿದ್ದ. ಅದರಂತೆ 'ಕನ್ನಡಪ್ರಭ'ವೂ ಸೇರಿದಂತೆ ಮಾಧ್ಯಮಗಳಲ್ಲಿ ಈ ಮಗುವಿನ ಫೋಟೋ ಪ್ರಕಟವಾಗಿತ್ತು.
ಈ ಫೋಟೋವನ್ನು ನೋಡಿ ತಂದೆ ಬಸಪ್ಪ ಸ್ಪೂರ್ತಿಧಾಮಕ್ಕೆ ಬಂದಿದ್ದಾರೆ ಮತ್ತು ತನ್ನ ಹೆಂಡತಿ ನಡುವಿನ ಜಗಳದ, ಆತ್ಮಹತ್ಯೆ ಯತ್ನದ ಕತೆಯನ್ನು ತಿಳಿಸಿದ್ದಾರೆ.
ಕೇಶವ ಕೋಟೇಶ್ವರ ಅವರು ಮಗುವನ್ನು ತಂದೆಗೆ ಒಪ್ಪಿಸುವುದಕ್ಕೆ ಸಿದ್ಧರಾಗಿದ್ದಾರೆ. ಆದರೆ ಇದಕ್ಕೆ ಉಡುಪಿ, ಶಿವಮೊಗ್ಗ ಮತ್ತು ಬಾಗಲಕೋಟೆ ಮಕ್ಕಳ ಕಲ್ಯಾಣ ಸಮಿತಿಯ ಒಪ್ಪಿಗೆ ಬೇಕಾಗಿದೆ. ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.