ಮಣಿಪಾಲ: ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದ ಘಟನೆ ನಂತರ ಸರ್ಕಾರ ಮಾತ್ರವಲ್ಲ ಇದೀಗ ಸಾರ್ವಜನಿಕರೂ ಎಚ್ಚೆತ್ತುಕೊಂಡಿದ್ದಾರೆ.
ಇಲ್ಲಿನ ಸೆಟ್ಟಿಬೆಟ್ಟು ಎಂಬಲ್ಲಿ ಸ್ಥಳೀಯರು ಅಂಗನವಾಡಿ ಕೇಂದ್ರದ ಬಳಿ ಇದ್ದ ತೆರೆದ ಕೊಳವೆ ಬಾವಿ ಮುಚ್ಚಿ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಸೆಟ್ಟಿಬೆಟ್ಟು ವಾರ್ಡಿನ ಸೆಟ್ಟಿಬೆಟ್ಟು ಎಂಬಲ್ಲಿರುವ ಪ್ರಾಥಮಿಕ ಶಾಲೆಯ ತಿರುವಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೋಸ್ಕರ ಐದಾರು ವರ್ಷಗಳ ಹಿಂದೆ ಈ ಕೊಳವೆ ಬಾವಿ ನಿರ್ಮಿಸಲಾಗಿತ್ತು. ನೀರು ಬಾರದ ಹಿನ್ನೆಲೆಯಲ್ಲಿ ಅದನ್ನು ಹಾಗೆ ಬಿಟ್ಟಿದ್ದು, ಹತ್ತಿರದಲ್ಲಿಯೇ ಇರುವ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಪಾಯವನ್ನುಂಟು ಮಾಡುವ ಸಂಭವ ಇತ್ತು. ಆದರೆ ಅದನ್ನು ನಿರ್ಮಿಸಿದ ಗುತ್ತಿಗೆದಾರರಾಗಲಿ, ಸರ್ಕಾರಿ ಅಧಿಕಾರಿಗಳಾಗಿ ಅದನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ್ದರು.
ಇದೀಗ ಮಾಧ್ಯಮಗಳಲ್ಲಿ ಬಾಗಲಕೋಟೆ ಪ್ರಕರಣ ತೀವ್ರವಾಗಿ ಜನರಲ್ಲಿ ಅರಿವನ್ನುಂಟು ಮಾಡುತ್ತಿದ್ದು, ಸಮೀಪದ ಪರ್ಕಳದ ಸ್ವರ್ಣ ಪ್ರೆಂಡ್ಸ್ ಹಾಗೂ ಸೆಟ್ಟಿಬೆಟ್ಟು ಸ್ಥಳೀಯರು ಈ ಕೊಳವೆ ಬಾವಿಯನ್ನು ಬುಧವಾರ ಶ್ರಮದಾನದ ಮೂಲಕ ಮುಚ್ಚಿದರು.
ಸರ್ಕಾರಿ ಜಾಗದಲ್ಲಿರುವ ಈ ಕೊಳವೆ ಬಗ್ಗೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಅರುಣ ಈ ಬಗ್ಗೆ ಸ್ಥಳೀಯ ಯುವಕರಿಗೆ ಮಾಹಿತಿ ನೀಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಇದೇ ರೀತಿ ಈ ವಾರ್ಡ್‌ನಲ್ಲಿ ಯಾರೇ ಆಗಲಿ ತೆರೆದ ಕೊಳವೆ ಬಾವಿಯ ಬಗ್ಗೆ ಮಾಹಿತಿ ನೀಡಿದರೆ ನಾವು ಅದನ್ನ ಮುಚ್ಚಿಸುವ ಕಾರ್ಯ ಮಾಡುತ್ತೇವೆ ಎಂದು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸ್ಥಳೀಯರಾದ ರಾಮದಾಸ್ ನಾಯಕ್, ಗಣೇಶ್ ಸರಳೇಬೆಟ್ಟು ಮುಂತಾದವರು ತಿಳಿಸಿದ್ದಾರೆ.
933 ಬೋರ್‌ವೆಲ್‌ಗಳಿವೆ: ಜಿಲ್ಲೆಯಲ್ಲಿ ಇಂತಹ 933 ವಿಫಲವಾದ ಬೋರ್‌ವೆಲ್‌ಗಳಿವೆ, ಅವುಗಳನ್ನು ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಎಲ್ಲಾ ಬೋರ್‌ವೆಲ್‌ಗಳನ್ನು ಅಧಿಕಾರಿಗಳು ಮುಚ್ಚುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸೆಟ್ಟಿಬೆಟ್ಟು ಗ್ರಾಮಸ್ಥರಂತೆ ಸ್ಥಳೀಯ ಜನರು ಮನಸ್ಸು ಮಾಡಿದರೇ, ಮುಂದೆ ಸಂಭವಿಸಬಹುದಾದ ಅಪಾಯಗಳನ್ನು ಖಂಡಿತ ತಡೆಯಬಹುದು.