ದಾಂಡೇಲಿ: ದಾಂಡೇಲಿಯನ್ನು 2013-14ನೇ ಸಾಲಿನ ಮುಂಗಡ ಪತ್ರ ಮಂಡನೆಯ ಸಂದರ್ಭದಲ್ಲಿ ನೂತನ ತಾಲೂಕನ್ನಾಗಿ ಘೋಷಿಸದೇ ಇರುವುದು ಈ ಭಾಗಕ್ಕೆ ಅನ್ಯಾಯವಾಗಿದೆ. ಈ ಕೂಡಲೇ ದಾಂಡೇಲಿಯನ್ನು 44ನೇ ಹೊಸ ತಾಲೂಕನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ಲಿಖಿತ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಹಿಂದೆ ದಾಂಡೇಲಿ ತಾಲೂಕು ಮಾಡಬೇಕೆಂದು ಹಲವಾರು ಬಾರಿ ಸಂಘ ಸಂಸ್ಥೆಗಳು ಮನವಿ ನೀಡಿ ಹೋರಾಟಗಳು ನಡೆದ ಉದಾಹರಣೆಗಳು ಇವೆ. ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.