ಶಿರಸಿ: ಗ್ರಾಮೀಣ ಮಟ್ಟದಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಪ್ರದೇಶವಾರು ಕ್ರೀಡೆಗಳ ಅಭಿವೃದ್ಧಿ, ಕ್ರೀಡಾಂಗಣದ ಗುಣಮಟ್ಟ ಕಾಪಾಡುವುದು ಈ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ರಾಜ್ಯ ಕ್ರೀಡಾ ನೀತಿ ರಚನಾ ಸಮಿತಿಯ ಸಭೆ ನಗರದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಈಚೆಗೆ ನಡೆಯಿತು.
ಸಭೆಯಲ್ಲಿ ಬೆಂಗಳೂರು ವಿವಿಯ ಯುಸಿಪಿಇಯ ಅಸೋಸಿಯೇಟ್ ಪ್ರೊಫೇಸರ್ ಸುಂದರ್ ರಾಜ್ ಅರಸ್, ಪಿಯು ಬೋರ್ಡ್ನ ವಸಂತ ಮುರ್ಡೇಶ್ವರ್, ಅಂತಾ ರಾಷ್ಟ್ರೀಯ ಕುಸ್ತಿಪಟು ರಥನ ರಾಚಯ್ಯ ಮಠಪತಿ, ಜಿಪಂ ಸಿಇಒ ಸಿ.ಎಸ್. ಸುಬ್ರಾಯ ಕಾಮತ್, ಅಂತಾ ರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ಕಾಶೀನಾಥ ನಾಯ್ಕ, ವಿವಿಧ ಕಾಲೇಜುಗಳ ದೈಹಿಕ ಉಪನ್ಯಾಸಕರು, ಅಂತಾ ರಾಷ್ಟ್ರೀಯ ಮಾಸ್ಟರ್ ಕ್ರೀಡಾಪಟುಗಳು, ಸ್ಥಳೀಯ ಕ್ರೀಡಾಳುಗಳು, ತರಬೇತುದಾರರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಲಹೆ-ಸೂಚನೆ: ಪ್ರೊ. ಸುಂದರ್ ರಾಜ್ ಅರಸ ವಿವಿಧ ವ್ಯಕ್ತಿಗಳಿಂದ ಸಲಹೆ ಸೂಚನೆಯನ್ನು ಪಡೆದುಕೊಂಡರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಹೊಸ್ಮನಿ ಮಾತನಾಡಿ, ಕ್ರೀಡೆಯನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಪಠ್ಯದ ಜೊತೆಗೆ ಯೋಗ ತರಬೇತಿಯನ್ನೂ ನೀಡುವ ಅಗತ್ಯವಿದೆ. ಕ್ರೀಡಾ ಚಟುವಟಿಕೆಯನ್ನು ಹೆಚ್ಚಿನ ಮಟ್ಟಿಗೆ ದಿನದ ಬೆಳಗಿನ ಅವಧಿಯಲ್ಲಿಯೇ ನಡೆಸಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲಿ 86 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಅದರಲ್ಲಿ ಕೇವಲ 4 ಕಾಲೇಜುಗಳಲ್ಲಿ ಮಾತ್ರ ದೈಹಿಕ ಶಿಕ್ಷಕರಿದ್ದಾರೆ. ಎಲ್ಲ ಪಿಯು ಕಾಲೇಜುಗಳಲ್ಲಿಯೂ ದೈಹಿಕ ಶಿಕ್ಷಕರನ್ನು ನೇಮಿಸಬೇಕು ಎಂದರು. ತಾಲೂಕಿನ ಗ್ರಾಮೀಣ ಪ್ರದೇಶದವರು ಯಾವುದೇ ಕ್ರೀಡಾಕೂಟ ನಡೆದಲ್ಲಿ ಜಿಲ್ಲಾ ಕ್ರೀಡಾಂಗಣ ಇರುವ ಶಿರಸಿಗೆ ಆಗಮಿಸಬೇಕು. ಆದ್ದರಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಹೆಚ್ಚಿನ ಅನುಕೂಲ ನೀಡಬೇಕಿದೆ ಎಂದು ಅವರು ಹೇಳಿದರು.
ದಾಂಡೇಲಿ ಬಂಗೂರನಗರ ಕಾಲೇಜಿನ ದೈಹಿಕ ಶಿಕ್ಷಕ ಪ್ರಕಾಶ ನಾರಾಯಣ ಮೆಹ್ತಾ, ಅಂತಾ ರಾಷ್ಟ್ರೀಯ ಕ್ರೀಡಾಪಟು ಕಾಶೀನಾಥ ನಾಯ್ಕ ಮಾತನಾಡಿ, ಶಿರಸಿಗೆ ಕ್ರೀಡಾಶಾಲೆ ಅಗತ್ಯವಿದೆ. ಜೊತೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಒಂದೊಂದು ಕ್ರೀಡಾಶಾಲೆ ನಿರ್ಮಾಣ ಮಾಡುವ ಅಗತ್ಯವಿದೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪದಕ ಗಳಿಸುವ ಕ್ರೀಡಾಪಟುಗಳಿಗೆ ಗೌರವ ಧನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಕೆಲಸವನ್ನು ನೀಡಬೇಕು. ಕೆಲವೊಂದು ಇಲಾಖೆಗಳಿಗೆ ಕ್ರೀಡಾಪಟುಗಳ ಕೋಟಾ ಅಡಿಯಲ್ಲಿ ಉದ್ಯೋಗವನ್ನು ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಗೆದ್ದವರಿಗೆ ಗೌರವ ಧನ ನೀಡಿ: ಹೊನ್ನಾವರದ ಕೆ.ವಿ. ಭಟ್ಟ, ವಸಂತ ಪಿ. ಬಂಢಾರಿ ಮಾತನಾಡಿದರು. ಶಿರಸಿ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕಿರಣ ನಾಯ್ಕ, ಮಾಸ್ಟರ್ ಅಥ್ಲಿಟ್ ಪ್ರಭಾಕರ ಜೋಗಳೇಕರ್, ಶಿರಸಿಗೆ ಕ್ರೀಡಾ ಪರಿಕರಗಳ ಅಗತ್ಯವಿದೆ. ಇಲ್ಲಿ ಕ್ರೀಡಾಕೂಟ ನಡೆಯುವಾಗ ಹೆಚ್ಚಿನ ಕ್ರೀಡೆಗಳನ್ನು ಆಡಿಸುವ ಬದಲು ಕೆಲವೇ ಕ್ರೀಡೆಯನ್ನಾಡಿಸುವುದು ಒಳ್ಳೆಯದು. ತಾಲೂಕು ಮಟ್ಟದಲ್ಲಿ ಗೆದ್ದವರಿಗೆ ಕಪ್ಪುಗಳ ಬದಲಾಗಿ ಗೌರವ ಧನವನ್ನು ನೀಡಬೇಕು ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಪ್ರೊ. ಸುಂದರ್ ರಾಜ್ ಅರಸ್ ಈ ಸಲಹೆಗಳನ್ನು ಕ್ರೀಡಾ ನೀತಿಯ ವೇಳೆಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.