ಭಟ್ಕಳ: ತಾಲೂಕಿನಲ್ಲಿ ಬಡವರಿಗೆ ಪಡಿತರ ಚೀಟಿ ಸಮರ್ಪಕ ರೀತಿಯಲ್ಲಿ ವಿತರಣೆ ಮಾಡುವಂತೆ ಆಗ್ರಹಿಸಿ ಭಟ್ಕಳ ಯುವ ಕಾಂಗ್ರೆಸ್ ಸಮಿತಿ ಶುಕ್ರವಾರ ಉಪವಿಭಾಗಾಧಿಕಾರಿ ಮೂಲಕ ಮಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಭೆ ಸೇರಿ ತಾಲೂಕಿನಲ್ಲಿ ಪಡಿತರ ಚೀಟಿ ವಿಳಂಬ ಹಾಗೂ ಅರ್ಹರಿಗೆ ಬಿಪಿಎಲ್ ವಿತರಣೆ ಆಗದಿರುವ ಕ್ರಮವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಅತಿಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ನಾಯ್ಕ, ಕಾಂಗ್ರೆಸ್ ಮುಖಂಡ ಟಿ.ಡಿ. ನಾಯ್ಕ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಬಡವರಿಗೆ ಸಿಗಬೇಕಾದ ಪಡಿತರ ಚೀಟಿಯನ್ನು ವಿತರಿಸದೇ ಅನ್ಯಾಯ ಮಾಡುತ್ತಿದೆ. ಇದರಿಂದ ಬಡವರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಬಡವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ವಾರದಲ್ಲಿ ಸಮಸ್ಯೆ ಸರಿಪಡಿಸದಿದ್ದರೆ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ಪ್ರಾರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು. ಮನವಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ನಾಯ್ಕ ಉಪ ವಿಭಾಗಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಗಣೇಶ ಭಟ್ ಅವರಿಗೆ ನೀಡಿದರು.
ಜಿಪಂ ಸದಸ್ಯೆ ಜಯಶ್ರೀ ಮೊಗೇರ, ಕಾಂಗ್ರೆಸ್ ಪ್ರಮುಖ ವೆಂಕ್ಟಯ್ಯ ಬೈರುಮನೆ, ಮಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಾಯ ನಾಯ್ಕ, ಪುಂಡಲೀಕ ಹೆಬಳೆ, ದುರ್ಗಾದಾಸ ಮೊಗೇರ, ಎನ್ಎಸ್ಯುಐ ಅಧ್ಯಕ್ಷ ಸಚಿನ ನಾಯ್ಕ, ನಾಗೇಶ ದೇವಾಡಿಗ, ಮಹಾಬಲೇಶ್ವರ ನಾಯ್ಕ ಮತ್ತಿತರರು ಇದ್ದರು.