ಕಾರವಾರ: ಮಹಿಳೆಯರು ದುರ್ಗೆಯರಂತಾಗಿ ಮದ್ಯಪಾನವೆಂಬ ರಕ್ತಬೀಜಾಸುರನ ವಿರುದ್ಧ ಹೋರಾಡಬೇಕು ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಕರೆ ನೀಡಿದರು.
ತಾಲೂಕಿನ ಉಳಗಾ ಮಹಾಸತಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾಚನಾಲಯ ಸಭಾಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ವ್ಯಸನಮುಕ್ತಿ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇವಲ ಕಾನೂನಿನಿಂದ ಮಾತ್ರ ಮದ್ಯಪಾನವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಅದು ಅಂತಃ ಸತ್ವದಿಂದ ಬರಬೇಕು ಎಂದು ಅವರು ಹೇಳಿದರು.
ಹೋರಾಟ ನಿರಂತರವಾಗಲಿ: ಮದ್ಯಪಾನದ ವಿರುದ್ಧ ಕೇವಲ ಒಂದು ದಿನ ಹೋರಾಟ ಮಾಡಿದರೆ ಸಾಲದು. ಆ ಹೋರಾಟ ನಿರಂತರವಾಗಿರಬೇಕು. ಒಟ್ಟೂ 22 ಗ್ರಾಮಗಳಲ್ಲಿ ವ್ಯಸನಮುಕ್ತಿ ಜಾಗೃತಿ ಅಭಿಯಾನ ನಡೆಸಲು ಮದ್ಯಪಾನ ಸಂಯಮ ಮಂಡಳಿ ತೀರ್ಮಾನಿಸಿದೆ. ವ್ಯಸನಮುಕ್ತಿ ಗ್ರಾಮ ಎಂದರೆ ಕೇವಲ ಮದ್ಯಪಾನವನ್ನು ಹೋಗಲಾಡಿಸುವುದಲ್ಲ. ಯಾವ ಅಪರಾಧ ಚಟುವಟಿಕೆಯೂ ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಸ್ತ್ರೀಶಕ್ತಿ ಸಂಘಗಳು ಇದಕ್ಕಾಗಿ ಅಣಿಯಾಗಬೇಕು ಎಂದು ಕರೆ ನೀಡಿದರು. ತಾಪಂ ಅಧ್ಯಕ್ಷೆ ಆರತಿ ಬಾನಾವಳಿ, ಗಾಢಸಾಯಿ ಗ್ರಾಪಂ ಅಧ್ಯಕ್ಷ ನಾರಾಯಣ ಗಾಂವಕರ, ತಾಪಂ ಸದಸ್ಯ ವಿಷ್ಣು ರಾಣೆ, ಗಾಢಸಾಯಿ ಗ್ರಾಪಂ ಸದಸ್ಯರುಗಳಾದ ಚಂದಾ ನಾಯ್ಕ, ಲಕ್ಷ್ಮೀ ನಾಡರ್, ಸುಧಾಮ ನಾಯಕ ಮತ್ತಿತರರು ಇದ್ದರು. ನಂತರ ವ್ಯಸನಮುಕ್ತ ಗ್ರಾಮ ಯೋಜನೆ ಗೌರವ ಸಂಯೋಜಕ ನರೇಂದ್ರ ಹೆಗಡೆ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಮದ್ಯಪಾನದ ವಿರುದ್ದ ಜಾಗೃತಿ ಜಾಥಾ ನಡೆಯಿತು. ಜಾಥಾದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ತರುವಾಯ ಯಕ್ಷಗಾನ ಪ್ರದರ್ಶನ ನಡೆಯಿತು.