- ಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ, ಮುಂಡಗೋಡ, ಜ. 21
ಜಲಾಶಯಗಳು ನೀರಿಲ್ಲದೆ ಖಾಲಿ ಖಾಲಿಯಾಗಿದ್ದು, ಸುತ್ತಲಿನ ರೈತರು, ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ತೀವ್ರ ಮಳೆ ಕೊರತೆಯಿಂದಾಗಿ ತಾಲೂಕಿನ ಯಾವುದೇ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರಲಿಲ್ಲ. ಬೇಸಿಗೆ ಪ್ರಾರಂಭದ ಮುನ್ನವೇ ತಾಲೂಕಿನ ಜಲಾಶಯ ಹಾಗೂ ಕೆರಗಳು ಒಣಗಿ ಬರಡು ಗುಂಡಿಯಂತೆ ಭಾಸವಾಗುತ್ತಿವೆ.
9 ಜಲಾಶಯ ಹಾಗೂ ಸುಮಾರು 20 ಕೆರೆಗಳನ್ನು ಹೊಂದಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆ, ಜಲಾಶಯಗಳನ್ನೊಳಗೊಂಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಡಗೋಡ ತಾಲೂಕಿನಲ್ಲಿ ಜಲಾಶಯಗಳು ಹೋಗಲಿ ಕೆರೆ ಕಟ್ಟೆಗಳು ಸಹ ನೀರಿಲ್ಲದೆ ಬತ್ತಿ ಹೋಗಿವೆ. ಜಲಾಶಯದ ನೀರು ಆಶ್ರಯಿಸಿ ಒಣ ಬೇಸಾಯ ಮಾಡುತ್ತಿದ್ದ ರೈತರು ಈಗ ಜಲಾಶಯಗಳು ಖಾಲಿ ಖಾಲಿಯಾಗಿರುವುದರಿಂದ ಹೈರಾಣಾಗಿದ್ದಾರೆ.
ಸುಮಾರು 1944 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ, 310 ಕ್ಯುಸೆಕ್ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿರುವ, ತಾಲೂಕಿನ ಬಾಚಣಕಿ, ಇಂದೂರಕೊಪ್ಪ, ಹುನಗುಂದ ಭಾಗದ ರೈತರ ಭೂಮಿಗೆ ಆಶ್ರಯದಾತವಾಗಿರುವ ಬಾಚಣಕಿ ಜಲಾಶಯದಲ್ಲಿ ಈಗ ಕಿಂಚಿತ್ತು ನೀರಿಲ್ಲದೆ ಮರಭೂಮಿಯಂತೆ ಭಾಸವಾಗುತ್ತಿದೆ.
ಜಾನುವಾರುಗಳಿಗೂ ನೀರಿಲ್ಲ: 1441 ಹೆಕ್ಟೇರ್ ಭೂಪ್ರದೇಶಕ್ಕೆ ನೀರುಣಿಸುವ ಹಾಗೂ 289.90 ಕ್ಯುಸೆಕ್ ನೀರಿನ ಸಾಮರ್ಥ್ಯವಿರುವ ಚಿಗಳ್ಳಿ ಜಲಾಶಯ, ಅರಶಿಣಗೇರಿ ಜಲಾಶಯ ಮತ್ತು ಸಿಂಗನಳ್ಳಿ ಜಲಾಶಯ ಕೂಡ ನೀರಿಲ್ಲದೆ ಬತ್ತಿ ಹೋಗಿದೆ. ನ್ಯಾಸರ್ಗಿ ಹಾಗೂ ರಾಮಾಪುರ ಜಲಾಶಯದ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಸುಮಾರು 740 ಹೆಕ್ಟೇರ್ ಕೃಷಿಭೂಮಿಗೆ ನೀರುಣಿಸುವ ಹಾಗೂ ಮುಖ್ಯವಾಗಿ ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸನವಳ್ಳಿ ಜಲಾಶಯವಂತೂ ಈ ಬಾರಿ ಬತ್ತಿ ಮರುಭೂಮಿಯಂತಾಗಿ ಅಲ್ಲಲ್ಲಿರುವ ತೆಗ್ಗು ದಿನ್ನೆಗಳಲ್ಲಿ ಮಾತ್ರ ನೀರು ಕಾಣಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಜಲಾಶಯದ ನೀರನ್ನೇ ಅವಲಂಬಿಸಿ ಸುತ್ತಮುತ್ತ ಬಹುತೇಕ ಪ್ರದೇಶ ಬಿತ್ತನೆ ಮಾಡಿ ಕೊಂಡಿರುವ ರೈತರು ಈಗ ನೀರಿನ ಕೊರತೆಯಿಂದ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಬಹುತೇಕ ಜಲಾಶಯಗಳ ಹೊರ ಕಾಲುವೆ ಹೋಗಲಿ ಒಳ ಕಾಲುವೆಗಳು ಕೂಡ ನೀರಿಲ್ಲದೆ ಬತ್ತಿ ಹೋಗಿವೆ. ಒಟ್ಟಾರೆ ಹಿಂದೆಂದು ಕಾಣದ ಸ್ಥಿತಿ ಈ ಬಾರಿ ಇಲ್ಲಿಯ ಜಲಾಶಯಗಳು ಕಾಣುತ್ತಿವೆ. ಕೆರೆ ಕಟ್ಟೆಗಳ ಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಮುಂದಿನ ದಿನಗಳಲ್ಲಿ ರೈತರ ಸ್ಥಿತಿ ಗಂಭೀರವಾಗಲಿದ್ದು, ಜಾನುವಾರುಗಳಿಗೆ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಈಗಾಗಲೇ ಬರಗಾಲ ಘೋಷಣೆಯಾಗಿರುವ ಈ ಪ್ರದೇಶದ ರೈತರು ಜಾನುವಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ದೂರದ ಮಂಗಳೂರ, ಬೆಂಗಳೂರ, ಗೋವಾ ಸೇರಿದಂತೆ ಕಾಫಿ ಸೀಮೆ ಭಾಗಗಳಿಗೆ ವಲಸೆ ಹೋಗುತ್ತಿರುವುದು ಕಂಡುಬರುತ್ತಿದೆ.
ಜಲಾಶಯ ಕೆರೆಗಳಲ್ಲಿ ಹೂಳು: ತಾಲೂಕಿನ ಜಲಾಶಯ ಹಾಗೂ ಕೆರೆಗಳಲ್ಲಿ ಸಮರ್ಪಕವಾಗಿ ಹೂಳು ತೆಗೆಯಲಾಗಿಲ್ಲ. ಇದರಿಂದ ಬಹುತೇಕ ಜಲಾಶಯ, ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ನೀರಾವರಿ ಯೋಜನೆಯಲ್ಲಿ ಇಲಾಖೆಯಿಂದ ಜಲಾಶಯ ಮತ್ತು ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಪ್ರತಿ ವರ್ಷ ರು. ಕೊಟ್ಯಂತರ ಖರ್ಚು ಹಾಕಲಾಗುತ್ತದೆ. ಯಾವುದೇ ಜಲಾಶಯಗಳ ಹೂಳೆತ್ತುವ ಕಾರ್ಯ ಮಾತ್ರ ನಡೆಯುವುದಿಲ್ಲ ಎಂದು ರೈತ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಈಗಲಾದರೂ ಸಂಬಂಧಿಸಿದ ಇಲಾಖೆ ಇತ್ತ ಗಮನಹರಿಸಿ ಅಗತ್ಯವಿರುವ ಕಡೆ ಪ್ರಾಮಾಣಿಕವಾಗಿ ಹೂಳೆತ್ತುವ ಕೆಲಸಕ್ಕೆ ಮುಂದಾಗಬೇಕಿದ್ದು, ಮುಂದಿನ ದಿನಗಳಲ್ಲಾದರೂ ರೈತರಿಗೆ ಜಲಾಶಯಗಳ ಸಮರ್ಪಕ ಉಪಯೋಗವಾಗುವಂತೆ ಕಾಳಜಿವಹಿಸಬೇಕಿದೆ.