ಹೊನ್ನಾವರ: ವಿಕಲಾಂಗರ ಬಗೆಗೆ ಅವಗಣನೆ ಅವಹೇಳನ ಸಲ್ಲದು. ಅವರಲ್ಲೂ ಪ್ರತಿಭೆ, ಪ್ರತಿಭಾವಂತರಿದ್ದಾರೆ. ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡು ಗೌರವ ನೀಡಬೇಕು ಎಂದು ಶಾಸಕ ಜೆ.ಡಿ. ನಾಯ್ಕ ಹೇಳಿದರು.
ಅವರು ಪಟ್ಟಣದ ಸೇಂಟ್ ಅಂತೋನಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಸಾ.ಶಿ. ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ ಅಂಗವಿಕಲರ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಚಟುವಟಿಕೆ ಹಮ್ಮಿಕೊಂಡಿದ್ದು ಇಂತಹ ಕ್ರೀಡಾಕೂಟ ಅಂಗವಿಕಲರ ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡುವಲ್ಲಿ ಭರವಸೆ ತುಂಬುವಲ್ಲಿ ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.
ಆತ್ಮವಿಶ್ವಾಸ
ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯ ಕೃಷ್ಣ ಗೌಡ ಮಾತನಾಡಿ, ಸಾಧನೆಗೆ, ಸಾಧಕರಿಗೆ ವಿಕಲತೆ ಎಂದೂ ಅಡ್ಡಿಯಾಗಿಲ್ಲ. ಅದನ್ನು ಬದುಕಿನ ಒಂದು ಭಾಗವಾಗಿ ಸ್ವೀಕರಿಸಿ ಭವಿಷ್ಯವನ್ನು ಸವಾಲಾಗಿ ಸ್ವೀಕರಿಸಬೇಕು. ವಿದ್ಯಾರ್ಥಿ ದಿಸೆಯಲ್ಲೇ ಅಂತಹ ಆತ್ಮವಿಶ್ವಾಸ ಮೂಡಿಸುವಲ್ಲಿ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು. ತಾಪಂ ಉಪಾಧ್ಯಕ್ಷೆ ಪಾರ್ವತಿ ಮುಕ್ರಿ, ಮಂಕಿ ಬಿಸಿಸಿ ಅಧ್ಯಕ್ಷ ಚಂದ್ರಶೇಖರ ಗೌಡ, ದೈ.ಶಿ. ಸಂಘದ ಜಿಲ್ಲಾ ಅಧ್ಯಕ್ಷೆ ಸಾಧನಾ ಬರ್ಗಿ, ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಎನ್.ಎಸ್. ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಆರ್.ಟಿ. ಹೆಬ್ಬಾರ, ಆರ್.ಟಿ. ನಾಯ್ಕ, ತಾಪಂ ಸದಸ್ಯ ಭಾಷಾ ಅಹಮ್ಮದ್ ಪಟೇಲ್, ವಿ.ಆರ್. ಶಾಸ್ತ್ರಿ, ದೈ.ಶಿ. ಪರಿವೀಕ್ಷಕ ಎಸ್.ಎನ್. ಗೌಡ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಬಿಇಓ ವಿ.ಆರ್. ನಾಯ್ಕ ಸ್ವಾಗತಿಸಿದರು. ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಬೇರೆ ಬೇರೆ ತಾಲೂಕುಗಳಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ನೂರಿಪ್ಪತ್ತಕ್ಕೂ ಹೆಚ್ಚು ವಿಕಲಚೇತನ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲ ನಡೆಯಿತು. ರಾಜೇಶ್ ನಾಯಕ ನಿರೂಪಿಸಿದರು.