ಕುಮಟಾ: ಗೌಡ ಸಾರಸ್ವತ ಬ್ರಾಹಣ ಸಮಾಜ ಮತ್ತು ಯುವಸೇವಾ ವಾಹಿನಿಯ ಉತ್ತರ ಕನ್ನಡ ಜಿಲ್ಲಾ 11ನೇ ಸಮಾವೇಶ ಚಿತ್ರಿಗಿಯ ವಿಷ್ಣುತೀರ್ಥ ಪ್ರಾಂಗಣದಲ್ಲಿ ಜ. 27ರಂದು ಬೆಳಗ್ಗೆ 9ರಿಂದ ನಡೆಯಲಿದೆ ಎಂದು ಸಮಾವೇಶ ಸಮಿತಿ ಅಧ್ಯಕ್ಷ ರತ್ನಾಕರ ಬಿ. ಕಾಮತ ತಿಳಿಸಿದರು. ಮಂಗಳವಾರ ಸಂಜೆ ವೆಂಕಟರಮಣ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಹುಬ್ಬಳ್ಳಿಯ ಉದ್ಯಮಿ ಆರ್.ಎನ್. ನಾಯಕ ಉದ್ಘಾಟಿಸಲಿದ್ದು, ಅಧ್ಯಕ್ಷರಾಗಿ ತಿರುಪತಿ ತಿರುಮಲ ದೇವಾಲಯ ಟ್ರಸ್ಟಿನ ಧರ್ಮದರ್ಶಿ ಆರ್.ವಿ. ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ. ವಕ್ತಾರರಾಗಿ ರಂಗಕರ್ಮಿ, ಕೊಂಕಣಿ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಸರಗೋಡು ಚಿನ್ನಾ, ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ದೇವದತ್ತ ಕಾಮತ, ಜಿಎಸ್ಬಿ ಯುವ ಸೇವಾ ವಾಹಿನಿ ಜಿಲ್ಲಾಧ್ಯಕ್ಷ ರಾಘವ ಬಾಳೇರಿ, ಕಾರ್ಯದರ್ಶಿ ರವಿ ಲಕ್ಮಣ ಶಾನಭಾಗ ಭಾಗವಹಿಸಲಿದ್ದಾರೆ ಎಂದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ಶಾನಭಾಗ ಹೆಗಡೆಕರ ಮಾತನಾಡಿ, ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಉಡುಪಿಯ ಶಾಂತಾರಾಮ ಭಂಡಾರಕರ್ ಪಾಲ್ಗೊಳ್ಳುವರು. ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ಆಸ್ಪತ್ರೆಯ ವಿತ್ತ ನಿರ್ದೇಶಕ ವಿ.ಜಿ. ಪ್ರಭು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಕ್ತಾರರಾಗಿ ಡಾ ಹೇಮಂತ ಕಾಮತ, ಅತಿಥಿಗಳಾಗಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು, ಹಳಿಯಾಳ ಶಾಸಕ ಸುನೀಲ ಹೆಗಡೆ, ಉದ್ಯಮಿ ಮುಂಬಯಿಯ ದಾಮೋದರ ವಿ. ಭಟ್ ಆಗಮಿಸುವರು. ವಿಚಾರಗೋಷ್ಠುಲ್ಲಿ ವೇ.ಮೂ. ಡಾ ಪವನ ಶ್ರೀಪಾದ ಭಟ್ಟ, ಮೈಸೂರಿನ ಜಯಶ್ರೀ ಶಾನಭಾಗ ಹಾಗೂ ಜೋತ್ಸ್ನಾ ಕಾಮತ ಭಾಗವಹಿಸುವರು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಮಧ್ಯಂತರದಲ್ಲಿ ಹಾಗೂ ಸಂಜೆ 6ರಿಂದ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದು, ಸಿದ್ಧತೆ ಕೈಗೊಳ್ಳಲಾಗಿದೆ ಎಂದರು. ಪ್ರಮುಖರಾದ ಸದಾನಂದ ವೈ. ಪ್ರಭು, ಅಜಿತ ಪಿ. ಭಟ್ಟ, ಎಂ.ಕೆ. ಶಾನಭಾಗ, ಜ್ಞಾನದಾ ಶಾನಭಾಗ ಇದ್ದರು.