ಮುಂಡಗೋಡ: ಇಲ್ಲಿಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ವಿದ್ಯುತ್ ಸಲಕರಣೆಗಳ ತುರ್ತು ನಿರ್ವಹಣೆ ಕೈಗೊಳ್ಳುತ್ತಿರುವುದರಿಂದ ಮುಂಡಗೋಡ ಪಟ್ಟಣ ಹಾಗೂ ಚವಡಳ್ಳಿ, ಗುಂಜಾವತಿ, ಹುನಗುಂದ, ನಂದಿಕಟ್ಟಾ, ಬಾಚಣಕಿ, ಇಂದೂರ ಗ್ರಾಪಂ ವ್ಯಾಪ್ತಿ ಹಾಗೂ ಟಿಬೆಟಿಯನ್ ಕಾಲನಿಯಲ್ಲಿ ಜ. 30ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗಿಗಳಿಗೆ ಹಣ್ಣು ವಿತರಣೆ
ಹೊನ್ನಾವರ: ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ತ್ರಿಶೂಲ ಫ್ರೆಂಡ್ಸ್ನ ಸದಸ್ಯರು ಕಾಸರಕೋಡಿನ ಸ್ನೇಹಕುಂಜ ದವಾಖಾನೆಯಲ್ಲಿರುವ ರೋಗಿಗಳಿಗೆ ಮತ್ತು ಶ್ರೀ ಕೃಷ್ಣಧಾಮದ ವಾಸಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ಉಮೇಶ ಮೇಸ್ತ, ಉಪಾಧ್ಯಕ್ಷ ಜಿ.ಎನ್. ನಾಯ್ಕ, ಕಾರ್ಯದರ್ಶಿ ಜಿ.ವಿ. ನಾಯ್ಕ, ನಿರ್ದೇಶಕ ಸುಧಾಕರ, ಪ್ರದೀಪ ಶೆಟ್ಟಿ, ಎಲ್.ಪಿ. ಮೇಸ್ತ ಮತ್ತು ವಿಷ್ಣು ನಾಯ್ಕ ಇದ್ದರು.
ಛದ್ಮವೇಷ: ಪ್ರಣವ ಪ್ರಥಮ
ಹೊನ್ನಾವರ: ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ ಅಂಗವಾಗಿ ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಮಾರ್ಥೋಮಾ ಶಾಲೆಯ ವಿದ್ಯಾರ್ಥಿ ಪ್ರಣವ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ 11 ತಾಲೂಕುಗಳಿಂದ ತಲಾ ಒಬ್ಬ ಸ್ಪರ್ಧಿ ಪಾಲ್ಗೊಂಡಿದ್ದರು.
ಅತಿಯಾದ ಮದ್ಯ ಸೇವಿಸಿ ಸಾವು
ಮುಂಡಗೋಡ: ಅತಿಯಾದ ಮದ್ಯ ಸೇವಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ತೆಗ್ಗಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ. ಮಾರುತಿ ಶಂಭು ಇಂಗೋಲೆ (35) ಜ. 27ರಂದು ರಾತ್ರಿ ಗ್ರಾಮದ ಬೀದಿಯೊಂದರಲ್ಲಿ ಉಸಿರುಗಟ್ಟಿದಂತೆ ವರ್ತಿಸುತ್ತ ಮಲಗಿದ್ದ. ಇದನ್ನು ಗಮನಿಸಿದ ಗ್ರಾಮಸ್ಥರು ಆತನನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಮುಂಡಗೋಡ ಠಾಣೆ ಪೊಲೀಸರು ತಿಳಿಸಿದ್ದಾರೆ.