ಕುಮಟಾ: ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಆಯುಷ್ ಸಮ್ಮೇಳನ ಇಲ್ಲಿನ ಹವ್ಯಕ ಸಭಾಭವನದಲ್ಲಿ ಶನಿವಾರ ಜರುಗಿತು. ಕವಿ ಡಾ. ಬಿ.ಎ. ಸನದಿ ಸಮ್ಮೇಳನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಾಶ್ಚಿಮಾತ್ಯ ಜೀವನ ಪದ್ಧತಿ ಅನುಕರಣೆ ಮಾಡುವುದರಿಂದ ಭಾರತೀಯ ಜೀವನ ಪದ್ಧತಿ ಕ್ಷೀಣಿಸುತ್ತಿದೆ. ಇಂದು ಮಾನಸಿಕ ಒತ್ತಡದಿಂದಾಗಿ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ. ಆರೋಗ್ಯ ಕಾಪಾಡಿಕೊಳ್ಳಬಹುದಾದ ವೈದ್ಯಕೀಯ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀರಭದ್ರಪ್ಪ ಮುಸರಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ತಜ್ಞ ವೈದ್ಯ ಡಾ. ಪ್ರವೀಣ ಜಕಬ್, ಬಿ.ಎಂ. ಪೈ ಚ್ಯಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಎಂ.ಬಿ. ಪೈ, ಲಯನ್ಸ್ ಅಧ್ಯಕ್ಷ ಡಾ. ವಿ.ಡಿ. ಕೆರೂ, ರೋಟರಿ ಅಧ್ಯಕ್ಷ ಎಸ್.ವಿ. ಹೆಗಡೆ ನಂದಯ್ಯನ್, ಯಕ್ಷಗಾನ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ವಸಂತ ಭಟ್ಟ ಇದ್ದರು. ಶಿರಸಿ ನಿಸರ್ಗ ಟ್ರಸ್ಟ್ ಅಧ್ಯಕ್ಷ ಡಾ. ವೆಂಕಟರಮಣ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿ, ಸಮ್ಮೇಳನ ಉದ್ದೇಶಗಳನ್ನು ವಿವರಿಸಿದರು.