ಕನ್ನಡಪ್ರಭ ವಾರ್ತೆ, ಕಾರವಾರ, ಜು. 7
ರಾಜ್ಯದ ಕರಾವಳಿಯವರಾದ ಸದಾನಂದ ಗೌಡ ರೇಲ್ವೆ ಸಚಿವರಾಗಿ ಚೊಚ್ಚಲ ಬಜೆಟ್ ಮಂಡಿಸುತ್ತಿರುವುದರಿಂದ ಉತ್ತರ ಕನ್ನಡದ ಕರಾವಳಿಗರ ನಿರೀಕ್ಷೆ ಭಾರಿ ಹೆಚ್ಚಿದೆ. ಅಟಲ್ ಬಿಹಾರಿ ವಾಜಪೇಯಿ ಶಿಲಾನ್ಯಾಸ ನೆರವೇರಿಸಿದ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಬಜೆಟ್ನಲ್ಲಿ ಚಾಲನೆ ನೀಡುವ ಉನತೆ ಆಶಾಭಾವ ಜಿಲ್ಲೆಯ ಜನತೆಯದ್ದಾಗಿದೆ.
ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದ ಕನಸು ಇಂದು ನಿನ್ನೆಯದಲ್ಲ. ಹಾಗಂತ ಈ ರೈಲು ಮಾರ್ಗ ದಕ್ಕಿದ ಮೇಲೂ ಸಿಕ್ಕದೆ ನೆನೆಗುದಿಗೆಯಲ್ಲೇ ಬಿದ್ದಿರುವುದು ಜಿಲ್ಲೆಯ ಜನತೆಯಲ್ಲಿ ಭಾರಿ ನಿರಾಶೆಯನ್ನುಂಟುಮಾಡಿದೆ.
15 ವರ್ಷಗಳ ಹಿಂದೆ ಎನ್ಡಿಎ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ರೈಲು ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಅದಾದ ಮೇಲೆ ಹುಬ್ಬಳ್ಳಿಯಿಂದ ಕಲಘಟಗಿ ತನಕ ಸುಮಾರು 25 ಕಿ.ಮೀ.ದೂರ ರೈಲು ಮಾರ್ಗ ನಿರ್ಮಾಣವೂ ಆಯಿತು.
ಸುಪ್ರೀಂಗೆ ಮೊರೆ: ಅಷ್ಟರಲ್ಲಿ ಪರಿಸರವಾದಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದ ರೈಲು ಮಾರ್ಗ ನಿರ್ಮಾಣ ನೆನೆಗುದಿಗೆಯಲ್ಲಿ ಬಿತ್ತು. ಈ ರೈಲು ಮಾರ್ಗದ ನಡುವೆ ಆನೆಗಳು ನಡೆದಾಡುವ (ಎಲಿಫಂಟ್ ಕಾರಿಡಾರ್) ಮಾರ್ಗ ಬರುತ್ತಿದೆ. ರೈಲು ಮಾರ್ಗ ನಿರ್ಮಾಣದಿಂದ ಅಪಾರ ಪ್ರಮಾಣದ ಮರ, ಗಿಡಗಳು ನಾಶವಾಗಲಿದೆ ಎನ್ನುವುದು ಪರಿಸರವಾದಿಗಳ ವಾದವಾಗಿತ್ತು.
ಇನ್ನೂ ಹೆಚ್ಚಿನ ಆಶಾಭಾವ: ಈ ಹಿನ್ನೆಲೆಯಲ್ಲಿ ಈ ರೈಲು ಮಾರ್ಗ ನಿರ್ಮಾಣ ಸಾಧ್ಯವಾಗಲೇ ಇಲ್ಲ.
ನಿರಾಶೆ: ಪ್ರತಿ ಬಜೆಟ್ನಲ್ಲೂ ಜಿಲ್ಲೆಯ ಜನತೆ ಆಶಾಭಾವ ಹೊಂದುವುದು, ಬಜೆಟ್ನಲ್ಲಿ ಚಿಕ್ಕಾಸೂ ಸಿಗದೆ ನಿರಾಶರಾಗುವುದು ಕಳೆದ 14 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಈಗ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಈ ರೈಲು ಮಾರ್ಗದ ಕನಸು ಮತ್ತೆ ಗರಿಗೆದರಲು ಕಾರಣವಾಗಿದೆ. ಹಾಗಂತ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗದ ಹೊರತೂ ಏನೂ ಮಾಡುವಂತಿಲ್ಲ. ಕೊನೇಪಕ್ಷ ಬಜೆಟ್ನಲ್ಲಿ ಹಣವನ್ನಾದರೂ ಮೀಸಲಿಟ್ಟರೆ ಸಾಕಿತ್ತು ಎಂಬ ಅಭಿಪ್ರಾಯ ಬಲವಾಗಿ ವ್ಯಕ್ತವಾಗುತ್ತಿದೆ.
ನಡುವೆ ಅಂದರೆ ಎರಡು ವರ್ಷಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡವೊಂದು ಈ ರೈಲು ಮಾರ್ಗದ ಸಮೀಕ್ಷೆ ನಡೆಸಿ, ಪರಿಸರಕ್ಕೆ ಹೆಚ್ಚಿನ ಹಾನಿ ಇಲ್ಲದೆ ಹಾಗೂ ಎಲಿಫಂಟ್ ಕಾರಿಡಾರ್ಗೂ ತೊಂದರೆ ಆಗದಂತೆ ಹೇಗೆ ರೈಲು ಮಾರ್ಗ ನಿರ್ಮಾಣ ಮಾಡಬಹುದು ಎನ್ನುವ ಬಗ್ಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಅದಾದ ಮೇಲೆ ಅಧಿಕಾರಿಗಳ ತಂಡವೊಂದು ಆಗಮಿಸಿ ಪರಿಶೀಲನೆಯನ್ನೂ ನಡೆಸಿದೆ. ಇದೂ ಕೂಡ ರೈಲು ಮಾರ್ಗ ನಿರ್ಮಾಣಕ್ಕೆ ಪೂರಕವಾಗಿಯೇ ಇದೆ.
ಪ್ರಗತಿಗೆ ಪೂರಕ: ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣದಿಂದ ಕರಾವಳಿಯ ಅಭಿವೃದ್ಧಿ ಸಾಧ್ಯ ಎನ್ನುವುದು ಬಲವಾಗಿ ಕೇಳಿಬರುತ್ತಿರುವ ಮಾತು. ಏಕೆಂದರೆ ರಾಜ್ಯದ ವಾಣಿಜ್ಯ ನಗರವಾದ ಹುಬ್ಬಳ್ಳಿಯನ್ನು ಸಂಪರ್ಕಿಸಲು ಕರಾವಳಿಯಿಂದ ಯಾವುದೆ ರೈಲು ಮಾರ್ಗ ಇಲ್ಲ.
ಈ ರೈಲು ಮಾರ್ಗದ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರನ್ನೂ ತಲುಪಬಹುದು. ಉತ್ತರ ಕರ್ನಾಟಕದ ಜತೆ ವ್ಯಾಪಾರ, ವಾಣಿಜ್ಯ ಸಂಬಂಧವನ್ನು ಹೊಂದಬಹುದಾಗಿದೆ.
ರೈಲು ಸಂಪರ್ಕದಿಂದ ಕರಾವಳಿ ಪ್ರದೇಶದಲ್ಲಿ ಉದ್ದಿಮೆಗಳೂ ತಲೆ ಎತ್ತಿ ಉದ್ಯೋಗಾವಕಾಶಗಳೂ ಲಭ್ಯವಾಗಲಿದೆ. ಹೀಗಾಗಿ ಕರಾವಳಿಯ ಜನತೆ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗಕ್ಕಾಗಿ ದಶಕದಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅಂಕೋಲಾ ಹುಬ್ಬಳ್ಳಿ ರೇಲ್ವೆ ಮಾರ್ಗ ಹೋರಾಟ ಸಮಿತಿಯನ್ನು ಹುಟ್ಟುಹಾಕಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ.
ಕರಾವಳಿ ಭಾಗದ ಸದಾನಂದ ಗೌಡ ರೇಲ್ವೆ ಸಚಿವರಾಗಿರುವುದು ಸಹಜವಾಗಿ ಉತ್ತರ ಕನ್ನಡದ ಕರಾವಳಿಗರ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಈ ಎಲ್ಲ ನಿರೀಕ್ಷೆ, ಕುತೂಹಲಗಳಿಗೆ ಮಂಗಳವಾರ ಮಂಡಿಸಲಿರುವ ರೇಲ್ವೆ ಬಜೆಟ್ನಲ್ಲಿ ಉತ್ತರ ದೊರೆಯಲಿದೆ.
-ವಸಂತಕುಮಾರ್ ಕತಗಾಲ