ಹೊನ್ನಾವರ: ಕನ್ನಡಿಗರನ್ನು ಒಕ್ಕಲೆಬ್ಬಿಸುವ ಗೋವಾ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕದ ಜನರಿಗಾಗುವ ಅವಮಾನ ತಪ್ಪಿಸುವಂತೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಹೊನ್ನಾವರ ತಾಲೂಕು ಕರವೇ ಘಟಕ ಮನವಿ ಸಲ್ಲಿಸಿದೆ.
ಕೂಲಿ ಕೆಲಸಕ್ಕಾಗಿ ವಲಸೆ ಹೋಗಿರುವ ಕನ್ನಡಿಗರನ್ನು ಇಲ್ಲ ಸಲ್ಲದ ಕಾರಣ ನೀಡಿ ಒಕ್ಕಲೆಬ್ಬಿಸಿದ ಗೋವಾ ಸರ್ಕಾರದ ಕ್ರಮ ಅಮಾನವೀಯ. ಭಾರತೀಯರಿಗೆ ದೇಶದ ಯಾವುದೇ ಪ್ರದೇಶದಲ್ಲಿ ವಾಸಿಸುವ ಹಕ್ಕಿದೆ. ಗೋವಾ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರಾಗಿ, ಬೇಕರಿ, ಹೋಟೆಲ್ಗಳಲ್ಲಿ ಕನ್ನಡಿಗರೇ ದುಡಿಯುತ್ತಿದ್ದಾರೆ. ಅಲ್ಲದೆ, ಕಾರವಾರ ಪಾಸಿಂಗ್ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸುವುದರಿಂದ ಸಹ ಕನ್ನಡಿಗರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಆದ್ದರಿಂದ ತಾವು ಮಧ್ಯ ಪ್ರವೇಶಿಸಿ ಗೋವಾ ಸರ್ಕಾರದದಿಂದ ಕನ್ನಡಿಗರಿಗೆ ಆಗುವ ಹಾನಿಯನ್ನು ತಪ್ಪಿಸುವಂತೆ ಹಾಗೂ ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಕರವೇ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಉದಯರಾಜ್ ಮೇಸ್ತ, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಸುಧಾಕರ ಹೊನ್ನಾವರ, ಕಾರ್ಯದರ್ಶಿ ಗಣೇಶ ಹೊನ್ನಾವರ, ಗೌರವಾಧ್ಯಕ್ಷ ಸ್ಟೀಫನ್ ರೋಡ್ರಗ್ರೀಸ್, ಉಪಾಧ್ಯಕ್ಷ ಶೇಖರ್ ಒಗ್ಗರ್, ಸದಸ್ಯರಾದ ಗಣಪತಿ ಮೇಸ್ತ, ನಿತಿನ್ ಮೇಸ್ತ, ನಾಗರಾಜ್ ಮೇಸ್ತ, ಧರ್ಮ ಅಂಬಿಗ, ಮಾರುತಿ ಸಂಕೊಳ್ಳಿ ವಿಷ್ಣು ಗೌಡ, ಅಜಿತ್ ನಾಯ್ಕ ಪಾಲ್ಗೊಂಡಿದ್ದರು.