ತ.ಸು.ಶಾಮರಾಯರ ಬಗ್ಗೆ ಎಷ್ಟು ಬರೆದರೂ ಅಲ್ಪವೇ. ಇಂದು ಕೆಲವು ಶಿಕ್ಷಕರು ಅದರಲ್ಲೂ ಕೆಲ ಮುಖ್ಯ ಶಿಕ್ಷಕರು ತಮ್ಮ ಹುದ್ದೆಯನ್ನು ಬಹುದೊಡ್ಡ ಅಧಿಕಾರವೆಂದು ತಿಳಿದು ತಮ್ಮ ಸಹೋದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲೆಂದೇ ಪ್ರಯತ್ನಿಸುತ್ತಿರುತ್ತಾರೆ. ಆದರೆ ಶಿಕ್ಷಕ ವೃತ್ತಿ ಒಂದು ಪವಿತ್ರವಾದ ಕಾರ್ಯ ಎಂದು ತಿಳಿದ ಕೆಲವೇ ಕೆಲವರಲ್ಲಿ ತ.ಸು.ಶಾಮರಾಯರು ಮೊದಲ ಸಾಲಿನಲ್ಲಿದ್ದಾರೆ. ಅವರಿಗೆ ತಮ್ಮ ವಿದ್ಯಾರ್ಥಿಗಳ ಬಗ್ಗೆ ಅತೀವ ಪ್ರೀತಿ ಮತ್ತು ವಾತ್ಸಲ್ಯ. ಬಡವಿದ್ಯಾರ್ಥಿಗಳನ್ನು ಕಂಡರಂತೂ ತುಂಬಾ ಅನುಕಂಪ. ಅದೆಷ್ಟು ವಿದ್ಯಾರ್ಥಿಗಳಿಗೆ ಊಟ ಹಾಕಿದ್ದಾರೋ ತಿಳಿಯದು. ಫೀಸ್ ಕಟ್ಟದ ವಿದ್ಯಾರ್ಥಿಗಳ ಹೆಸರು ನೋಟೀಸ್ ಬೋರ್ಡ್ನ ಮೇಲೆ ಕಂಡರಂತೂ ಅಂತಹ ವಿದ್ಯಾರ್ಥಿಗಳನ್ನು ಕರೆಸಿ ಅವರಿಗೆ ಹಣ ನೀಡಿ ಫೀಸು ಕಟ್ಟಲು ಹೇಳುತ್ತಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಅವರ ಮನೆಯೇ ಆಶ್ರಯ ತಾಣ. ಹೀಗೆ ಅವರ ಶಿಷ್ಯರಾಗಿದ್ದವರು ಜಿ.ಎಸ್.ಎಸ್, ಹಾ.ಮಾ.ನಾ., ಸಿಪಿ.ಕೆ, ಪ್ರಭುಶಂಕರ, ಎಂ.ಚಿದಾನಂದ ಮೂರ್ತಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಹಂಪನಾ, ಸಾ.ಶಿ.ಮರುಳಯ್ಯ, ಕಮಲಾ ಹಂಪನಾ, ಬಸವಾರಾಧ್ಯ, ಅ.ರಾ.ಮಿತ್ರ, ಟಿವಿ.ವೆಂಕಟಾಚಲಶಾಸ್ತ್ರಿ, ಅಬ್ದುಲ್ ನಜೀರ್ ಸಾಬ್ ಮುಂತಾದವರು. ಅವರೆಲ್ಲರೂ ತಮ್ಮ ಕ್ಷೇತ್ರದಲ್ಲಿ ದಿಗ್ಗಜರೇ. ಒಮ್ಮೆ ಮೈಸೂರಿನ ಟೌನ್ ಹಾಲಿನಲ್ಲಿ ಸಭೆಯೊಂದು ನಡೆದಿತ್ತು. ತುಂಬಿದ ಸಭೆಯಲ್ಲಿ ವೇದಿಕೆಯ ಮೇಲಿದ್ದವರು ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು. ಟೌನ್ ಹಾಲ್ನ ಒಳಗೆ ಬಂದ ತ.ಸು.ಶಾಮರಾಯರನ್ನು ಗಮನಿಸಿದ ಬಂಗಾರಪ್ಪನವರು, ವೇದಿಕೆಯಿಂದ ಇಳಿದು ಬಂದವರೇ ಅವರ ಕಾಲಿಗೆರಗಿದರು. ವೃದ್ಧಾಪ್ಯದಿಂದ ಕಣ್ಣುಗಳು ಮಂಜಾಗಿದ್ದರಿಂದ ಶಾಮರಾಯರಿಗೆ ತಕ್ಷಣ ಬಂಗಾರಪ್ಪನವರ ಗುರುತು ಸಿಗಲಿಲ್ಲ. ಆದರೂ ಶಾಮರಾಯರು ಅವರನ್ನು ಹಿಡಿದೆತ್ತಿ, 'ಯಾರೊ ಮಗು ನೀನು?' ಎಂದು ಪ್ರಶ್ನಿಸಿದರು. ಅದಕ್ಕೆ ಬಂಗಾರಪ್ಪನವರು ತಮ್ಮ ಪರಿಚಯ ಹೇಳಿಕೊಂಡು ಶಿಷ್ಯನಿಗೆ ಆಶೀರ್ವದಿಸಲು ಬಿನ್ನವಿಸಿಕೊಂಡರು. ಶಾಮರಾಯರಿಗೆ ತುಂಬಾ ಸಂತಸವಾಯಿತು. ತಮ್ಮ ಶಿಷ್ಯರಲ್ಲಿ ಕೆಲವರು, ಶಾಸಕರು, ಸಂಸದರು, ಸಚಿವರೂ ಆಗಿದ್ದರು. ಆದರೀಗ ಮುಖ್ಯಮಂತ್ರಿಯೂ ಆದ ಸುದ್ದಿ ತಿಳಿದು ಬಂಗಾರಪ್ಪನವರನ್ನು ಬಲವಾಗಿ ತಬ್ಬಿಕೊಂಡರು. ಗುರು-ಶಿಷ್ಯರ ಕಣ್ಣುಗಳಲ್ಲಿ ಅಶ್ರುಧಾರೆ ತಾನೇ ತಾನಾಗಿ ಹರಿದುಬಂತು. ಅಲ್ಲಿ ಸೇರಿದ್ದ ಅಪಾರ ಜನಸಮೂಹ ಆ ಅಪೂರ್ವ ದೃಶ್ಯಕ್ಕೆ ಮೂಕ ಪ್ರೇಕ್ಷಕರಾಗಿದ್ದರು. ಇದು ಶಾಮರಾಯರು ಗಳಿಸಿದ ಶಿಷ್ಯ ವಾತ್ಸಲ್ಯ ಮತ್ತು ಅಭಿಮಾನ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ