ಸಂಪಾದಕೀಯ

ಸಮಾಜಕ್ಕಾಗಿ ನಾನು

ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರಿಂದ ಹಣ, ಒಡವೆ ಸಂಗ್ರಹಿಸುವಾಗ ಅನೇಕರು ಸಾವಿರಗಟ್ಟಲೆ ಹಣ, ಮೈಮೇಲಿದ್ದ ಒಡವೆಯನ್ನು ಗಾಂಧೀಜಿಯವರಿಗೆ ಕಳಚಿಕೊಟ್ಟ ನಿದರ್ಶನಗಳು ಅನೇಕ. ಆದರೆ ಒಬ್ಬ ಮುದುಕಿ ತನ್ನ ಉಡಿಯಲ್ಲಿದ್ದ ಒಂದು ರುಪಾಯಿಯ ನಾಣ್ಯವನ್ನು ಗಾಂಧೀಜಿಯವರಿಗೆ ನೀಡಿದಾಗ ಗಾಂಧೀಜಿ ಆ ಒಂದು ರುಪಾಯಿಯ ಬೆಲೆ ಸಾವಿರಗಟ್ಟಲೆ ಹಣಕ್ಕಿಂತ ಶ್ರೇಷ್ಠ ಎಂದು ಶ್ಲಾಘಿಸಿದ್ದರು. ಏಕೆಂದರೆ ನಿರ್ಗತಿಕಳಾದ ಆ ಮುದುಕಿಯ ಒಂದು ದಿನದ ದುಡಿಮೆ ಅದಾಗಿತ್ತು. ಅದೇರೀತಿ ಬೆಳಗಾವಿ ಜಿಲ್ಲೆಯ ಯಕ್ಸಾಂಬಾದಲ್ಲಿ ಕೆಲವರ್ಷಗಳ ಹಿಂದೆ ಗಂಗೂಬಾಯಿ ಮಸ್ತೆ ಎಂಬ ಹಣ್ಣುಹಣ್ಣು ಮುದುಕಿ ಇದ್ದಳು. ಕೈಲಾಗದ ಪರಿಸ್ಥಿತಿಯಲ್ಲೂ ಕಲಿತಿದ್ದ ನಾಟಿ ಔಷಧಿ ನೀಡುತ್ತಾ ಎಲ್ಲರ ಸೌಖ್ಯವನ್ನು ಕಾಪಾಡುವ ಕಾಮಧೇನುವಾಗಿದ್ದಳು. ಬಡತನದ ಜೀವನ ನಡೆಸಿದರೂ ಯಾರಿಗೂ ಕೈಚಾಚಿದ್ದಿಲ್ಲ. ಕೂಲಿ-ನಾಲಿ ಮಾಡುತ್ತಾ ಜೀವನ ಮಾಡುತ್ತಿದ್ದ ಈ ವೃದ್ಧೆ ಔಷಧಿ ನೀಡಿದರೂ ಅದಕ್ಕೆ ಪ್ರತಿಫಲವಾಗಿ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ. ನರಳುತ್ತಾ ಬಂದವರು ನಗುತ್ತಾ ಹೋಗಬೇಕೆಂಬುದು ಆಕೆಯ ಆಶಯವಾಗಿತ್ತು. ರೋಗ ವಾಸಿಯಾದವರು ಕೃತಜ್ಞತಾ ಪೂರ್ವಕವಾಗಿ ಏನಾದರೂ ಹಣ ನೀಡಿದರೆ ಅದಕ್ಕಾಗಿಯೇ ಇಟ್ಟಿದ್ದ ಒಂದು ಡಬ್ಬಿಯಲ್ಲಿ ಹಾಕುವಂತೆ ಹೇಳುತ್ತಿದ್ದಳು. ಅದನ್ನು ಅಪ್ಪಿತಪ್ಪಿಯೂ ಎಂತಹ ಸಂದರ್ಭದಲ್ಲಿಯೂ ತನ್ನ ಸ್ವಂತ ಬಳಕೆಗಾಗಿ ಉಪಯೋಗಿಸುತ್ತಿರಲಿಲ್ಲ.
ಒಮ್ಮೆ ಅಲ್ಲಿನ ಗೆಳೆಯರ ಬಳಗದ ಕೆಲವರು ಸಾರ್ವಜನಿಕರ ವಂತಿಕೆಯಿಂದ ಒಂದು ಕನ್ನಡ ಪ್ರಾಥಮಿಕ ಶಾಲೆ ಕಟ್ಟಡ ಕಟ್ಟಲು ನಿರ್ಧರಿಸಿದರು. ಅದಕ್ಕೆ ಕೆಲವರು ಶ್ರೀಮಂತರು ಹತ್ತಿಪ್ಪತ್ತು ಸಾವಿರ ಹಣ ನೀಡಲು ಮುಂದೆ ಬಂದರು. ತಾನೂ ಊರ ಶಾಲೆಗೆ ಏನಾದರೂ ಕಾಣಿಕೆ ನೀಡಬೇಕೆಂದು ಆ ಮುದುಕಿಗೆ ಅನಿಸಿತು. ಗೆಳೆಯರ ಬಳಗದ ಸದಸ್ಯರನ್ನು ಕರೆದು ತನ್ನ ಹುಂಡಿಯನ್ನು ಒಡೆದು ಅವರ ಮುಂದೆ ಸುರಿದರು. ಆ ಚಿಲ್ಲರೆ ಕಾಸನ್ನು ಎಣಿಸಿದಾಗ ಒಂದು ಸಾವಿರದಷ್ಟು ಹಣವಿತ್ತು. ಅದನ್ನೆಲ್ಲಾ ಶಾಲೆ ಕಟ್ಟಡನಿರ್ಮಾಣಕ್ಕಾಗಿ ನೀಡಿ ಸಾರ್ಥಕತೆಯ ನಿಟ್ಟುಸಿರು ಬಿಟ್ಟಳು. ಹೀಗೆಯೇ ಮುಂದೆ ಅನೇಕಬಾರಿ ಈ ರೀತಿ ಸಂಗ್ರಹಿಸಿದ ಹಣವನ್ನು ಬಡ ವಿದಾರ್ಥಿಗಳಿಗೋ, ದೇವಾಲಯಕ್ಕೋ, ಅನಾಥರಿಗೋ ಕೊಟ್ಟು ಬಿಡುತ್ತಿದ್ದಳು. ಈ ಬಗ್ಗೆ ಅವಳನ್ನು ಕೇಳಿದಾಗ ಆಕೆ ಹೇಳಿದ್ದು ಒಂದೇ ಮಾತು, 'ಸಮಾಜಕ್ಕಾಗಿ ನಾನು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಗಲೇ ಸ್ವಾರ್ಥ ಮರೆಯಾಗಿ ಸಾರ್ಥಕತೆ ಮನೆಮಾಡುತ್ತದೆ'. ಇಂಥವರು ನಮಗೆಲ್ಲಾ ಆದರ್ಶವಾಗಬೇಕು.

 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!